ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕುಗಳಲ್ಲಿ ಇಟ್ಟುಕೊಳ್ಳಬಾರದು. ಬ್ಯಾಂಕುಗಳ ಒಳ ಹಾಗೂ ಹೊರ ಆವರಣಗಳಲ್ಲಿ ಬ್ಯಾಂಕ್ ವ್ಯವಹಾರ ಮಾಡಲು ಬಂದಿರದೇ ಇರುವ ವ್ಯಕ್ತಿಗಳು, ಸಂಶಯಾಸ್ಪದ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿ ಅಥವಾ ಗ್ರಾಹಕರನ್ನು ಗಮನಿಸುತ್ತಿರುವಂತಹವರ ಮೇಲೆ ತೀವ್ರ ನಿಗಾವಹಿಸಬೇಕು ಎಂದು ಪಿಎಸ್ಐ ಎಂ.ಬಿ. ಬಿರಾದಾರ ಹೇಳಿದರು.
ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಜೊತೆ ಪೊಲೀಸ ಠಾಣೆಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಎಟಿಎಂ ಗಳಿಗೆ ಹಣ ಹಾಕಲು ಹೋಗುವಂತಹ ವಾಹನಗಳೊಂದಿಗೆ ಆಯುಧಗಳನ್ನು ಹೊಂದಿರುವ ಭದ್ರತಾ ಸಿಬ್ಬಂಧಿಯವರು ಕಡ್ಡಾಯವಾಗಿ ಇರುವಂತೆ ಜೊತೆಗೆ ಇತರೇ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡುವುದು. ಎಟಿಎಂ ಗಳಿಗೆ ಹಗಲು ರಾತ್ರಿ ಸೂಕ್ತ ರೀತಿಯಲ್ಲಿ ಭದ್ರತಾ ವ್ಯವಸ್ಥೆ, ಕಡ್ಡಾಯವಾಗಿ ಸೆಕ್ಯೂರಿಟಿ ಗಾರ್ಡ್, ಉತ್ತಮ ಸಿಸಿ ಟಿವಿ ಅಳವಡಿಕೆ ಇರುವಂತೆ ಕ್ರಮ ಕೈಗೊಳ್ಳುವುದು, ಎಟಿಎಂ ಗಳಿಗೆ ಹಣ ತುಂಬುವ ಸಿಬ್ಬಂದಿ, ವಾಹನ ಚಾಲಕ, ಆಯುಧ ಹೊಂದಿದ ಭದ್ರತಾ ಸಿಬ್ಬಂದಿಯವರಿಗೆ ನೇಮಿಸಿಕೊಳ್ಳುವ ಮೊದಲು ಅವರುಗಳ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು ಎಂದರು.
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಜೊತೆ ಸುರಕ್ಷತಾ ಕ್ರಮ ಹಾಗೂ ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ ಬ್ಯಾಂಕ್‌ಗಳಿಗೆ ಆಯುಧ ಹೊಂದಿದ ಸದೃಢ ಚುರುಕಾಗಿರುವ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು, ಅಹಿತಕರ ಘಟನೆ ಸಂಭವಿಸುವ ಸಾಧ್ಯತೆಗಳು ಕಂಡುಬಂದರೆ ಸೆಕ್ಯೂರಿಟಿ ಗಾರ್ಡ್ ಹತ್ತಿರ ಎಲ್ಲಾ ಸಿಬ್ಬಂದಿಯವರಿಗೆ ಸುಲಭವಾಗಿ ನಿಲುಕುವಂತೆ ಎಮರ್ಜೇನ್ಸಿ ಸೈರನ್ ಸಿಸ್ಟಮ್ ಸ್ವಿಚ್‌ಗಳನ್ನು ಅಳವಡಿಸಬೇಕು. ಬ್ಯಾಂಕ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ಭದ್ರತೆಯ ಸಲುವಾಗಿ ಮಾತ್ರ ಉಪಯೋಗಿಸಿಕೊಳ್ಳದೇ ಬೇರೆ ಬೇರೆ ಕೆಲಸಗಳಿಗೆ ಉಪಯೋಗಿಸುತ್ತಿರುವುದು ಕಂಡುಬಂದಿರುತ್ತದೆ. ಸದರಿ ಗಾರ್ಡ್‌ನವರು ರೈಫಲಗಳನ್ನು ಒಂದು ಕೋಣೆಯಲ್ಲಿಟ್ಟು ಇತರೇ ಕೆಲಸಗಳನ್ನು ಮಾಡುತ್ತಿರುವುದನ್ನು ನಮ್ಮ ಗಮನಕ್ಕೆ ಬಂದಿದ್ದು ಈ ರೀತಿ ಮಾಡಕೂಡದು. ಸೆಕ್ಯೂರಿಟಿ ಗಾರ್ಡ್ ಯಾವತ್ತೂ ಬ್ಯಾಂಕಿನ ಬಾಗಿಲಲ್ಲಿ ನಿಂತು ಹೊರ ಹೋಗುವ ಒಳ ಬರುವ ವ್ಯಕ್ತಿಗಳ ಮೇಲೆ ನಿಗಾವಹಿಸಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಂತಹವರನ್ನು ವಿಚಾರಣೆ ಮಾಡಬೇಕು.
ಬ್ಯಾಂಕ್‌ಗಳಿಂದ ಎಟಿಎಂ ಗಳಿಗೆ ಹಣ ತುಂಬಲು, ಹಣ ತೆಗೆದುಕೊಂಡು ಹೋಗುವ ಏಜನ್ಸಿಯವರು ಕಡ್ಡಾಯವಾಗಿ ಸೆಕ್ಯೂರಿಟಿ ಗಾರ್ಡ್ ಇಲ್ಲದೇ ಹಣ ತೆಗೆದುಕೊಂಡು ಹೋಗಲು ಬ್ಯಾಂಕ್ ಗಳಿಗೆ ಬರುವಂತಿಲ್ಲ, ಈ ಬಗ್ಗೆ ನೀವು ಏಜನ್ಸಿಯವರಿಗೆ ಸೂಕ್ತ ತಾಕೀತು ಮಾಡುವುದು ಮತ್ತು ಸೆಕ್ಯೂರಿಟಿ ಗಾರ್ಡ್ ಇಲ್ಲದೇ ಇರುವುದು ನಿಮಗೆ ಕಂಡುಬಂದ ಕೂಡಲೇ ನೀವು ಯಾವುದೇ ಕಾರಣಕ್ಕೂ ಹಣ ಅವರಿಗೆ ಕೊಡಕೂಡದು ಇತರೆ ಮುಂಜಾಗ್ರತಾ ಕ್ರಮದ ಕುರಿತು ಬ್ಯಾಂಕ ಅಧಿಕಾರಿಗಳಿಗೆ ಪಿಎಸ್ಐ ತಿಳಿಹೇಳಿದರು.