ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಬಂಜಾರ ಸಮಾಜ ಬಾಂಧವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಂಜಾರ ಸಮಾಜ ಬಾಂಧವರ ಬೇಡಿಕೆಯನ್ನು ಈಡೇರಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕರ್ನಾಟಕ ಬಂಜಾರ ನಿಗಮದ ಮಾಜಿ ನಿರ್ದೇಶಕ, ನ್ಯಾಯವಾದಿ ಮಲ್ಲಿಕಾರ್ಜುನ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜರುಗಿದ ಬಂಜಾರ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸಚಿವ ಸಂಪುಟದಲ್ಲಿ ಬಂಜಾರ ಸಮಾಜದ ಸಚಿವರು ಇಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರು, ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ನಮ್ಮ ಸಮಾಜಕ್ಕೆ ಸೇರಿದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಇಲ್ಲವೇ ಪ್ರಕಾಶ ರಾಠೋಡ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಮುತ್ಸದ್ದಿ ರಾಜಕಾರಣಿಯಾಗಿರುವ ಪ್ರಕಾಶ ರಾಠೋಡ ಅವರ ಎಂಎಲ್‌ಸಿ ಅವಧಿ ಮುಕ್ತಾಯವಾಗಿದೆ. ಪ್ರಕಾಶ ರಾಠೋಡ ಅವರ ತಂದೆ ದಿ.ಕೆ.ಟಿ.ರಾಠೋಡ ಅವರು ಸೇರಿದಂತೆ ಪ್ರಕಾಶ ರಾಠೋಡ ಅವರು ಬಂಜಾರ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಸರ್ಕಾರ ಮತ್ತೊಮ್ಮೆ ಪ್ರಕಾಶ ರಾಠೋಡ ಅವರಿಗೆ ಎಂಎಲ್‌ಸಿ ಮಾಡುವ ಮೂಲಕ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂಬುದು ಬಂಜಾರಾ ಸಮಾಜದ ಪರವಾಗಿ ಕೇಳಿಕೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ, ಮುಖಂಡರಾದ ಹರಿಲಾಲ ನಾಯಕ, ಕೃಷ್ಣ ನಾಯಕ, ರುಕ್ಮಿಣಿ ರಾಠೋಡ, ಗುರಪ್ಪ ಲಮಾಣಿ,ಡಾ.ಅರವಿಂದ ಚವ್ಹಾಣ, ರವಿ ಲಮಾಣಿ, ಬಾಬು ಚವ್ಹಾಣ, ಶಾಂತಪ್ಪ ರಾಠೋಡ, ವಿನೋದ ನಾಯಕ, ಪಿಂಟು ಚವ್ಹಾಣ, ಸುಭಾಸಚಂದ್ರ ರಾಠೋಡ, ರಾಜು ಲಮಾಣಿ, ಭೀಮು ಪವಾರ, ಆನಂದ ಲಮಾಣಿ, ಸುನೀಲ ನಾಯಕ, ವಿಜಯ ನಾಯಕ, ನಂಜುಂಡಿ ಚವ್ಹಾಣ, ಮೀಟು ಜಾಧವ, ಸಂತೋಷ ನಾಯಕ, ಕುಮಾರ ನಾಗವಾಡ ಇತರರು ಇದ್ದರು.