ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಕೀಲರ ಸಂಘದ ಸದಸ್ಯ ಈರಣ್ಣ ಶಂಕರಗೌಡ ವಡವಡಗಿ (ಗುಳಬಾಳ) ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ವಕೀಲರು ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
ವಕೀಲರು ನ್ಯಾಯಾಲಯದ ಹತ್ತಿರದ ವಿಜಯಪುರ ರಸ್ತೆಯಲ್ಲಿ ರಸ್ತೆ ತಡೆದು ಕೆಲಹೊತ್ತು ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಡಿ.ವೈ.ಎಸ್.ಪಿ ಬಲ್ಲಪ್ಪ ನಂದಗಾವಿ, ಪೊಲೀಸ್ ಇನ್ಸಪೆಕ್ಟರ್ ಗುರುಶಾಂತ ದಾಶ್ಯಾಳ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಸ್ತೆ ತಡೆಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ತಡೆ ನಿಲ್ಲಿಸಿ ಎಂದು ವಕೀಲರಿಗೆ ಮನವಿ ಮಾಡಿ ಮನವೊಲಿಸಿದರು.
ನಂತರ ನ್ಯಾಯಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ವಿ.ಬಿ.ಮರ್ತುರ, ಮಲ್ಲಿಕಾರ್ಜುನ ದೇವರಮನಿ, ಎಸ್.ಎಸ್.ಕೊಳೂರ, ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯತ್ತಿವೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಕೀಲರ ಸಂಘದ ಸದಸ್ಯ ಈರಣ್ಣ ವಡವಡಗಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿ.ವೈ.ಎಸ್.ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ವಕೀಲ ವಡವಡಗಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಕೀಲರಾದ ಬಿ.ಬಿ.ಬಿರಾದಾರ, ಜೆ.ಎಂ.ಮ್ಯಾಗೇರಿ, ವಿ.ಆರ್.ಚನ್ನಗೊಂಡ, ವಿ.ಬಿ.ಕಲ್ಲೂರ, ಎನ್.ಬಿ.ಕುಳಗೇರಿ, ಡಿ.ಎಸ್.ಪವಾರ, ಸಿ.ಆರ್.ಸುಬಾನಪ್ಪಗೊಳ, ರಾಜು ಅಡ್ಡೋಡಗಿ, ಎನ್.ಎಸ್.ಬಿರಾದಾರ, ಎಸ್.ಜೆ.ಆಲೂರ, ಎ.ಎ.ಆಲೂರ, ಎ.ಎ.ವಾಲೀಕಾರ, ಆಶೀಫ್ ನದಾಫ್, ಸಿ.ಎಂ.ಹಡಪದ, ಎಂ.ಎ.ಯರನಾಳ, ಎಸ್.ಎಸ್.ಮುಚಕಂಡಿ, ಎ.ಎಸ್.ಹಿಪ್ಪರಗಿ ಸೇರಿದಂತೆ ಇತರರು ಭಾಗವಹಿಸಿದ್ದರು.