ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೈಕ್ರೊ ಫೈನಾನ್ಸ್ ಹಾಗೂ ಚಿಟ್ ಫಂಡ್ಸ್ ಹಾವಳಿಗಳಿಂದ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರದಂದು ಜರುಗಿದ ಮಹಿಳಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಂತೆೆ ವಿಜಯಪುರ ಜಿಲ್ಲೆಯಲ್ಲಿಯೂ ಕೂಡ ಕೇಲವು ಫೈನಾನ್ಸ್ ಕಂಪನಿಗಳಿಂದ ತಡರಾತ್ರಿ ವರೆಗೂ ಮನೆಗೆ ಬಂದು ಕಂತು ತುಂಬಲು ಹಾಗೂ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿರುವ ಕುರಿತು ಇಲ್ಲಿಯ ಮಹಿಳೆಯರು ದೂರನ್ನು ನೀಡಿದ್ದು, ಈ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಎಲ್ಲ ಇಲಾಖೆಗಳಲ್ಲಿ ಆತಂರಿಕ ದೂರು ಸಮೀತಿ ರಚಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಎರಡು ದಿನಗಳಿಂದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ, ಮಹಿಳೆಯರು ಮಲ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕೆಲವು ಕಿಡಗೇಡಿಗಳು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುಗಳು ಬಂದಿದ್ದು ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ, ಸ್ಥಳಿಯ ಪೊಲೀಸ್ ಥಾಣಾಧಿಕಾರಿಗಳು ಮಹಿಳಾ ದೂರುದಾರರಿಗೆ ತಮ್ಮ ಸಹೋದರಿಯರಿಗೆ ತೊಂದರೆಯಾಗುತ್ತಿದೆ ಎಂದು ಸ್ಪಂದನೆ ನೀಡಬೇಕು ಎಂದರು.
ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಗ್ರೂಪ್-ಡಿ ಮಹಿಳಾ ಸಿಬ್ಬಂದಿಗಳಿಗೆ ನಿಗದಿ ಪಡಿಸಿದ ವೇತನಕ್ಕೆ ಬದಲಾಗಿ ಅರ್ಧ ಸಂಬಳ ನೀಡುತ್ತಿದ್ದಾರೆ ಎಂದು ದೂರು ಬಂದಿದ್ದು ಇಂತಹ ದೂರುಗಳು ಇರುವ ಟೆಂಡರ್ ಪಡೆದಂತಹ ಏಜನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.
ಕೆಲವು ಗ್ರಾಮಗಳಲ್ಲಿ ವಿಧವೆ, ಒಂಟಿ ಮಹಿಳೆಯರಿಗೆ ಪಡಿತರ ಚೀಟಿ ದೊರೆಯದೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಂತಹ ಮಹಿಳೆಯರಿಗೆ ಸೌಲಭ್ಯ ಕಲ್ಪಸಿಕೊಂಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸೌಲಭ್ಯ ಇಲಾಖೆಯ ಉಪನಿರ್ದೇಶಕರಿಗೆ ಹೇಳಿದರು.
ನರೇಗಾ ಯೋಜನೆಯಡಿ ಮಹಿಳೆಯರಿಗೆ ಉದ್ಯೋಗ ದೊರೆತ್ತಿಲ್ಲ ಎಂದು ದೂರು ಬಂದಿವೆ. ಶೇ.೫೦ರಷ್ಟು ಮಹಿಳೆಯರಿಗೆ ನರೇಗಾ ಅಡಿ ಉದ್ಯೋಗ ನೀಡುವ ವ್ಯವಸ್ಥೆ ಆಗಬೇಕು ಮತ್ತು ವೇತನವನ್ನು ಕೂಡಾ ಸರಿಯಾಗಿ ನೀಡದೆ ಸತಾಯಿಸುತ್ತಾರೆಂಬ ದೂರು ಇರುವುದರಿಂದ ಸಂಬಂಧಿಸಿದ್ದ ಗ್ರಾಮ ಪಂಚಾಯಿತಿ ಅಧಿಕಾರಿ ಅಲ್ಲಿನ ಮಹಿಳೆಯರ ಸಮಸ್ಯೆ ನಿವಾರಿಸುವಂತೆ ಎಚ್ಚರಿಕೆ ನೀಡಿದರು.
ಗ್ರಾಮಗಳಲ್ಲಿನ ಕೆಲವು ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ಮಹಿಳೆಯರಿಂದ ದೂರುಗಳು ಬಂದಿವೆ. ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಸಾರಾಯಿ ದೊರೆಯುವುದರಿಂದ ಗಂಡಂದಿರು ಕುಡಿದು ಬಂದು ಮಹಿಳೆಯರಿಗೆ ತೊಂದರೆ ಕೊಡುತ್ತಾರೆ ಎಂದು ಸಾಕಷ್ಟು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿರುವದರಿಂದ ಸಂಬಂಧಿಸಿದ ಅಧಿಕಾರಿಗಳು ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟವಾಗದಂತೆ ಆಗಾಗ ಪರಿಶೀಲನೆ ನಡೆಸುತ್ತಿರಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳಿರುವದರಿಂದ ಮುಂದಿನ ವಿದ್ಯಾಬ್ಯಾಸಕ್ಕೆ ನಗರ ಪ್ರದೇಶಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಲು ಹೆಚ್ಚಿನ ತಾಯಂದಿರು ಹಿಂದೇಟು ಹಾಕುತ್ತಿದ್ದಾರೆ. ಪ್ರೌಢ ಹಾಗೂ ಕಾಲೇಜು ಶಿಕ್ಷಣಗಳನ್ನು ಗ್ರಾಮಗಳಲ್ಲಿಯೇ ನೀಡಲು ವ್ಯವಸ್ಥೆ ಮಾಡಿದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿ ಬಾಲಕಿಯರಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.
ಮಹಿಳೆಯರಿಗೆ ವೃದ್ಧಾಪ್ಯ ಹಾಗೂ ವಿಧವಾ ವೇತನ ಪಡೆಯುವಲ್ಲಿ ಸಮಸ್ಯೆಗಳಾಗುತ್ತಿವೆ ಎಂಬ ದೂರುಗಳಿವೆ ಸಂಬಂಧಿಸಿದ್ದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಳ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ, ಜಿಲ್ಲಾ ಪಂಚಾಯತ ಯೋಜಾನಾ ನಿರ್ದೇಶಕ ಬಿ.ಎಸ್.ರಾಠೋಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಿ.ಕೆ.ಚೌಹಾಣ, ಸ್ಪೀಪ್ ರಾಯಭಾರಿ ರಾಜೇಶ ಪವಾರ, ಜಿಲ್ಲಾ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.