ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬ್ಯಾಂಕಿನ ಗ್ರಾಹಕರು ಮತ್ತು ಸಣ್ಣ ಸಣ್ಣ ವ್ಯಾಪಾರಿಗಳು ತಾವು ಅಲ್ಲಿಯೇ ಕುಳಿತುಕೊಂಡು ಕ್ಯೂಆರ್ ಕೋಡ್ ಮೂಲಕ ತಮ್ಮ ಖಾತೆಗೆ ಹಣವನ್ನು ಜಮಾ ಮಾಡಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ಹಮ್ಮಿಕೊಂಡ ಬ್ಯಾಂಕಿನ ಸಣ್ಣ ಸಣ್ಣ ವ್ಯಾಪಾರಸ್ಥ ಗ್ರಾಹಕರಿಗೆ ಕ್ಯೂಆರ್ ಕೋಡ್ ವಿತರಿಸಿ ಮಾತನಾಡಿದ ಅವರು, ಉತ್ತಮ ಗ್ರಾಹಕ ಸೇವೆಯನ್ನು ವಿಸ್ತರಿಸಲು ಮತ್ತು ಹೆಚ್ಚಿನ ಮಟ್ಟದ ಗ್ರಾಹಕರ ತೃಪ್ತಿಯನ್ನು ಸಾಧಿಸಲು ನಾವು ಉನ್ನತ ಗುಣಮಟ್ಟದ ಬ್ಯಾಂಕಿಂಗ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಸಾಲದ ಯೋಜನೆ, ಠೇವಣಿ ಸೇರಿದಂತೆ ಅನೇಕ ಬ್ಯಾಂಕಿನ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬ್ಯಾಂಕಿನ ಗ್ರಾಹಕರು ಬ್ಯಾಂಕಿನ ಅಭಿವೃದ್ಧಿಗಾಗಿ ಸದಾ ನಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ವೇಳೆ ಸಹಕಾರಿ ಅಭಿವೃದ್ಧಿ ಅಧಿಕಾರಿ ಲೀಲಾವತಿಗೌಡ ಮಾತನಾಡಿ, ಇಂದು ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಲಿದೆ. ಬ್ಯಾಂಕಿನ ಅನೇಕ ಸೇವೆಗಳು ಕ್ಷಣಾರ್ಧದಲ್ಲಿ ಪೂರೈಸುವಂತಹ ಕಾರ್ಯ ನಡೆಯುತ್ತಿವೆ. ಗ್ರಾಹಕರು ಕ್ಯೂಆರ್ ಕೋಡ್‌ನ್ನು ಅನಗತ್ಯವಾಗಿ ಬಳಸಬಾರದು. ಮತ್ತು ಇದರ ಗೌಪ್ಯತೆಯನ್ನು ಗ್ರಾಹಕರು ಕಾಪಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸುಮಾರು ೧೧ಜನ ಗ್ರಾಹಕರಿಗೆ ಕ್ಯೂಆರ್ ಕೋಡ್ ಅನ್ನು ವಿತರಿಸಲಾಯಿತು. ವೇದಿಕೆಯ ಮೇಲೆ ಬ್ಯಾಂಕಿನ್ ಉಪಾಧ್ಯಕ್ಷ ಡಾ.ರಾಜಶೇಖರ ಸಂಗಮ, ನಿರ್ದೇಶಕ ಮಂಡಳಿಯವರಾದ ಬಸವರಾಜ ಯರನಾಳ, ಮಾಳಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಮೈಬೂಬ್ ಮರ್ತೂರ ಮತ್ತು ಬ್ಯಾಂಕಿನ ವ್ಯವಸ್ಥಾಪಕ ಸಾಗರ್ ಕಿರಣಗಿ ವೇದಿಕೆ ಮೇಲಿದ್ದರು.