ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡೋಹರ, ಸಮಗಾರ, ಮಚಿಗಾರ ಸಮುದಾಯ ಸಾಕಷ್ಟು ವರ್ಷಗಳಿಂದ ಚರ್ಮವನ್ನು ಹದ ಮಾಡುವ ಚರ್ಮದಿಂದ ತಯಾರಾಗುವ ಉತ್ಪನ್ನಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಡೋಹರ ಸಮಾಜವನ್ನು ಅಲೇಮಾರಿ ಗುಂಪಿಗೆ ಸೇರಿಸಿ ಈ ಸಮುದಾಯಕ್ಕೆ ಅನ್ಯಾಯವೆಸಗಲಾಗಿದೆ. ಹಾಗಾಗಿ ಮತ್ತೇ ಈ ಸಮುದಾಯವನ್ನು ಚರ್ಮಕಾರರ ಗುಂಪಿಗೆ ಸೇರಿಸಬೇಕೆಂದು ವೀರಶೈವ ಡೋಹರ ಕಕ್ಕಯ್ಯ ಸಮಾಜದ ಗೌರವಾಧ್ಯಕ್ಷ ಕಿರಣ ಪರಶುರಾಮ ಕಟಕೆ ಹೇಳಿದರು.
ಸಿಂದಗಿಯ ಡೋಹರ, ಸಮಗಾರ, ಮಚಿಗಾರ ಸಮಾಜದ ಮುಖಂಡರಿಂದ ತಹಶೀಲ್ದಾರರ ಅವರ ಮೂಲಕ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್, ಬೆಂಗಳೂರಿನ ಏಕ ಸದಸ್ಯ ವಿಚಾರಣಾ ಆಯೋಗ ಇವರಿಗೆ ಡೋಹರ ಸಮಾಜವನ್ನು ಅಲೇಮಾರಿ ಗುಂಪಿಗೆ ಸೇರಿಸಿ ಈ ಸಮುದಾಯಕ್ಕೆ ಅನ್ಯಾಯವೆಸಗಲಾಗಿದ್ದು, ಈ ಜಾತಿಯನ್ನು ಚರ್ಮಕಾರರ ಗುಂಪಿಗೆ ಸೇರಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಡೋಹರ, ಮಚಿಗಾರ, ಸಮಗಾರ ಎಂಬ ೩ಹೆಸರುಗಳಿಂದ ಕರೆಯಲ್ಪಡುವ ತ್ರಿಮತಸ್ಥ ಚರ್ಮಕಾರ ವ್ಯಾಪ್ತಿಯಲ್ಲಿ ಬರುವ ೧೮ಜಾತಿಗಳ ಗುಂಪು ಮಾಡಬೇಕು. ಮಾದಿಗ ಸಮಾಜದಿಂದ ಬೇರ್ಪಡಿಸುವ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಒಳ ಮೀಸಲಾತಿಗೆ ಅನುಗುಣವಾಗಿ ಪ್ರತ್ಯೇಕ ಮೀಸಲಾತಿ ಘೋಷಿಸಬೇಕು. ತ್ರಿಮತಸ್ಥ ಚರ್ಮಕಾರರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸಮಗಾರ ಸಮಾಜದ ಕಾರ್ಯದರ್ಶಿ ಸದಾಶಿವ ಕಬಾಡೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡೋಹರ ಕಕ್ಕಯ್ಯ ಸಮಾಜ ಅಧ್ಯಕ್ಷ ಅಂಬರೀಶ ಚೌಗಲೆ, ಶಿವಶರಣ ಹರಳಯ್ಯ ಸಮಗಾರ ಸಮಾಜ ಅಧ್ಯಕ್ಷ ಸತ್ಯೆಪ್ಪ ಮನಗೂಳಿ, ಮಚಿಗಾರ ಸಮಾಜ ಅಧ್ಯಕ್ಷ ಶ್ರೀಕೃಷ್ಣ ಕಲ್ಲೂರ, ರಾಜಣ್ಣಿ ನಾರಾಯಣಕರ, ಗುರುಪಾದ ಮನಗೂಳಿ, ಅನೀಲ ಮಗ್ರುಮಕಾನೆ, ಬಸವರಾಜ ಕೆಂಭಾವಿ, ಪ್ರಕಾಶ ಶೇರಖಾನೆ, ಮಲ್ಲಿಕಾರ್ಜುನ ನಾರಾಯಣಕರ, ದಿಲೀಪ ಇಂಗಳೆ, ವಿಶ್ವನಾಥ ಗಜಾಕೋಶ, ಅನ್ನಪೂರ್ಣ ಹೋಟಗಾರ, ಗೀತಾ ಚೌಗಲೆ, ಆನಂದ ತೆರದಾಳ, ಅಶೋಕ ಮಗರುಮಖಾನೆ, ಮಲ್ಲಿಕಾರ್ಜುನ ನಾರಾಯಣಕರ, ರವಿಕುಮಾರ ಜಮಖಂಡಿ, ನಾಗು ನಾರಾಯಣಕರ ಸೇರಿದಂತೆ ಮೂರು ಸಮಾಜದ ಮುಖಂಡರು ಇದ್ದರು.