ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರ್ಕಾರದಿಂದ ನೀಡುತ್ತಿರುವ ಪಡಿತರ ಆಹಾರದಲ್ಲಿ ನುಸಿ ಹುಳುಗಳು, ಗೊಂಡೆಗಳು ಬಂದಿದ್ದು ಫಲಾನುಭವಿಗಳು ಸರಕಾರದ ಹಾಗೂ ಅಧಿಕಾರಿಗಳ ವಿರುಧ್ಧ ಹರಿಹಾಯುತ್ತಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಕಳಪೆ ಆಹಾರ ಪದಾರ್ಥಗಳು ಸರಬರಾಜು ಆಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಬೇಡಿಕೆ ಇರುವ ಜೋಳವನ್ನು ಪಡಿತರದಾರರಿಗೆ ನೀಡಲು ಸರ್ಕಾರ ತೀರ್ಮಾನಿಸಿ ಜೋಳವನ್ನು ನೀಡುತ್ತಿತ್ತು, ಆದರೆ ಕಳೆದ ಎರಡು ಮೂರು ತಿಂಗಳುಗಳಿಂದ ಜೋಳದಲ್ಲಿ ಗೊಂಡೆಗಳು, ನುಸಿ ಹುಳುಗಳು, ಚಿಕ್ಕ ಚಿಕ್ಕ ಕಲ್ಲುಗಳು ಸಹ ಬರುತ್ತಿವೆ ಎಂಬ ಆರೋಪವಿದೆ.
ಶುಕ್ರವಾರ ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘದ ಸಭಾಂಗಣದಲ್ಲಿ ಪಡಿತರ ವಿತರಿಸಲಾಗುತ್ತಿತ್ತು, ಜೋಳದಲ್ಲಿ ನುಸಿ ಹುಳುಗಳು ಗೊಂಡೆಗಳು ಬಂದಿದ್ದು, ಹಲವು ಪಡಿತರದಾರರು ಈ ಕುರಿತು ಅಂಗಡಿಯವರಿಗೆ ಪ್ರಶ್ನಿಸಿದ್ದಾರೆ, ನಮಗೆ ಏನು ಬರುತ್ತದೆ ಅದನ್ನೇ ನಾವು ಕೊಡುತ್ತಿದ್ದೇವೆ ಎಂದು ಪಡಿತರ ಹಂಚುವ ಸಿಬ್ಬಂದಿ ತಿಳಿಸಿದಾಗ, ಅಲ್ಲಿ ಪಡಿತರದಾರರು ತಹಸೀಲ್ದಾರ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಹಸಿಲ್ದಾರ್ ಬಿ.ಎಸ್.ಕಡಕಭಾವಿ ಆಹಾರ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಕೂಡಲೆ ಅಲ್ಲಿನ ದಾಸ್ತಾನು ಮರಳಿ ಪಡೆಯುವಂತೆ ಸೂಚಿಸಿ ಬೇರೆ ಜೋಳದ ಚೀಲಗಳನ್ನು ನೀಡುವಂತೆ ಸೂಚಿಸಿದ್ದಾರೆ.
ಕೊನೆಗೂ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಪಿ.ಎಲ್.ಹೂಗಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಗೊಂಡೆಗಳ ತುಂಬಿದ ಜೋಳವನ್ನು ಕೂಡಲೇ ವಾಹನದಲ್ಲಿ ತುಂಬಿಸಿ ಗೊಡಾವನಿಗೆ ಕಳುಹಿಸಿ, ಬೇರೆ ಪಡಿತರ ಕಳುಹಿಸಿದರು. ಕೊನೆಗೆ ಯೋಗ್ಯ ಜೋಳ ಬಂದ ನಂತರ ಪಡಿತರದಾರರು ಪಡಿತರ ತೆಗೆದುಕೊಂಡು ಹೋದ ಘಟನೆ ನಡೆಯಿತು.
ಪಡಿತರವನ್ನು ನಾವು ಸ್ಥಳೀಯವಾಗಿ ಖರೀದಿಸಲ್ಲ. ರಾಜ್ಯದಿಂದಲೇ ಪಡಿತರ ನೇರವಾಗಿ ನಮ್ಮ ದಾಸ್ತಾನು ಕೇಂದ್ರಕ್ಕೆ ಬರುತ್ತದೆ. ಅದನ್ನೇ ನಾವು ಪಡಿತರ ಅಂಗಡಿಗಳಿಗೆ ಕಳುಹಿಸಿಕೊಡುತ್ತೇವೆ ಎಂದು ಆಹಾರಾ ಇಲಾಖೆಯವರು ತಿಳಿಸಿದ್ದಾರೆ.
“ಕೆಲವೆಡೆ ಜೋಳದಲ್ಲಿ ಗೊಂಡೆಗಳು-ನುಸಿ ಬಂದಿವೆ ಎಂಬ ಆರೋಪ ಬಂದ ಹಿನ್ನೆಲೆ ನಗರದ ಕೆಲವು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನಾಲ್ಕೈದು ಚೀಲಗಳಲ್ಲಿ ನುಸಿ-ಗೊಂಡೆಗಳು ಬಂದಿವೆ. ಹೀಗಾಗಿ ಅವುಗಳನ್ನು ಮರಳಿ ಪಡೆದು ಬೇರೆ ದಾಸ್ತಾನು ನೀಡಿದ್ದೇವೆ.”
– ಪಿ.ಎಲ್. ಹೂಗಾರ
ಆಹಾರ ನಿರೀಕ್ಷಕರು, ಇಂಡಿ