ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯ ಈರಣ್ಣ ಶಂಕರಗೌಡ ವಡವಡಗಿ(ಗುಳಬಾಳ) ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಸ್ಥಳೀಯ ನ್ಯಾಯಾಲಯದ ಕಲಾಪಗಳಿಂದ ನ್ಯಾಯವಾದಿಗಳು ಗುರುವಾರ ದೂರ ಉಳಿಯುವ ಮೂಲಕ ಘಟನೆಯನ್ನು ಖಂಡಿಸಿದರು.
ಈ ವಿಷಯದ ಕುರಿತು ನ್ಯಾಯವಾದಿಗಳ ಸಂಘದ ಕಚೇರಿಯಲ್ಲಿ ತುರ್ತು ಸಭೆ ಕರೆದು ಸಭೆಯಲ್ಲಿ ಸಂಘದ ಸದಸ್ಯ ಈರಣ್ಣ ವಡವಡಗಿ ಅವರ ಮೇಲೆ ಜ.೨೨ ರಂದು ಸಂಜೆ ಮಾರಣಾಂತಿಕ ಹಲ್ಲೆಯಾಗಿರುವದನ್ನು ತೀವ್ರವಾಗಿ ಖಂಡಿಸಲಾಯಿತು. ಹಲ್ಲೆಗೊಳಾಗದ ನ್ಯಾಯವಾದಿಗಳು ಮುಂಚಿತವಾಗಿ ಆರೋಪಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ನೀಡಿದ್ದರು. ಈ ಕುರಿತು ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವದನ್ನು ಸಭೆಯು ತೀವ್ರವಾಗಿ ಖಂಡಿಸಿತು. ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳನ್ನು ಬಂಽಸುವವರೆಗೂ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುಲು ಸಭೆ ನಿರ್ಧರಿಸಿತು. ಈ ಆರೋಪಿತರ ಪರ ಸಂಘದ ಯಾವ ಸದಸ್ಯರು ವಕಾಲತ್ತು ವಹಿಸಬಾರದು. ಅಲ್ಲದೇ ಬೇರೆ ಸಂಘದ ಸದಸ್ಯರು ವಕಾಲತ್ತು ವಹಿಸಲು ಬಂದರೆ ಅವರಿಗೂ ಇದರ ಬಗ್ಗೆ ತಿಳಿಸಿ ಅವರು ವಕಾಲತ್ತು ವಹಿಸಿಕೊಳ್ಳದೇ ವಿನಂತಿಸಿಕೊಳ್ಳುವುದಾಗಿ ಸಭೆ ತೀರ್ಮಾನಿಸಿತು. ನಮ್ಮ ಸಂಘದ ಸಭೆಯಲ್ಲಿ ಠರಾವು ಪಾಸ್ ಆಗಿರುವ ಪ್ರತಿಯ ನಕಲನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಸಲ್ಲಿಸಲಾಗಿದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ನ್ಯಾಯವಾದಿಗಳಾದ ಬಿ.ಎಸ್.ಪವಾರ, ಸದಾನಂದ ಬಶೆಟ್ಟಿ, ಎಂ.ಎಸ್.ಬಿರಾದಾರ, ವ್ಹಿ.ಬಿ.ಮರ್ತುರ, ಎಸ್.ಎಲ್.ಲಮಾಣಿ, ಎಂ.ಎಂ.ದೇವರಮನಿ, ಸಿ.ಎಂ.ಹಡಪದ, ಪಿ.ಎಸ್.ಗಾಯಕವಾಡ ಸೇರಿದಂತೆ ಇತರರು ಇದ್ದರು.