ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಲೋಕಸಭಾ ಸದಸ್ಯೆ ಪ್ರಿಯಾಂಕಾ ವಾದ್ರಾ ಅವರನ್ನು ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ಅಸ್ಮಿತೆಯ ಪ್ರತೀಕ ವೀರ ರಾಣಿ ಚೆನ್ನಮ್ಮನವರೊಂದಿಗೆ ಹೋಲಿಕೆ ಮಾಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಸರಿಯಾದ ಕ್ರಮವಲ್ಲ. ವೀರರಾಣಿ ಕಿತ್ತೂರು ಚೆನ್ನಮ್ಮ ನವರು ಸ್ವತಂತ್ರ ಹೋರಾಟಕ್ಕಾಗಿ ಬ್ರಿಟಿಷರೊಂದಿಗೆ ಹೋರಾಟ ಮಾಡಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಧರ್ಮದ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದವರಾಗಿದ್ದರು. ಅವರು ದೇಶದ ಎಲ್ಲ ಜನರಿಗೆ ಮಾದರಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಕಿತ್ತೂರು ಚನ್ನಮ್ಮನವರ ವ್ಯಕ್ತಿತ್ವದ ಮುಂದೆ ಪ್ರಿಯಾಂಕ ವಾದ್ರಾ ಅವರು ಏನು ಅಲ್ಲ ಎನ್ನುವ ಸತ್ಯವನ್ನು ಮಲ್ಲಿಕಾರ್ಜುನ ಖರ್ಗೆ ತಿಳಿದುಕೊಳ್ಳಬೇಕು. ಅವರು ಪ್ರಿಯಾಂಕ ವಾದ್ರಾ ಅವರನ್ನು ಹೊಗಳಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜೊತೆಗೆ ಹೋಲಿಸುವುದು ಸರ್ವತಾ ಒಪ್ಪುವ ಮಾತಲ್ಲ. ಈ ರೀತಿ ಮಾತನಾಡುವ ಮೂಲಕ ಕನ್ನಡ ನಾಡಿಗೆ ಅವಮಾನ ಮಾಡಿದ್ದೀರಿ. ಇನ್ನು ಮುಂದೆ ಈ ರೀತಿ ಮಾತನಾಡಬಾರದು. ಇದು ದೇಶದ ಜನತೆಗೆ ಹಾಗೂ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದಂತಾಗುತ್ತದೆ. ರಾಜಕೀಯ ವ್ಯಕ್ತಿಗಳು ಮಾತನಾಡುವಾಗ ಸೂಕ್ಷ್ಮವಾಗಿ ಮಾತನಾಡಬೇಕಾದ ಅಗತ್ಯವಿದೆ ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನ ಅಧ್ಯಕ್ಷ,ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.