ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿಜಯಪುರ ನಗರದ ಹತ್ತಿರ ಇರುವ ಇಟ್ಟಂಗಿ ಬಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಕೂಲಿ ಕಾರ್ಮಿಕರ ಮೇಲೆ ಇಟ್ಟಂಗಿ ಬಟ್ಟಿ ಮಾಲೀಕ ಒಂದು ಚಿಕ್ಕ ಕಾರಣಕ್ಕೆ ಅಮಾನವೀಯ ಹಾಗೆ ಹಲ್ಲೆ ಮಾಡಿರುವುದು ಖಂಡನೀಯ.
ತಮ್ಮ ಹೊಟ್ಟೆ ಪಾಡಿಗೆ ಕೂಲಿ ಕೆಲಸವನ್ನು ಮಾಡುವ ಬಡವರ ಮೇಲೆ ಅಮಾನವೀಯ ರಾಕ್ಷಸ ಪ್ರವೃತ್ತಿಯಿಂದ ಮನಸಾ ಇಚ್ಛೆ ಹಲ್ಲೆ ಮಾಡಿರುವ ವಿಡಿಯೋವನ್ನು ನೋಡಿದರೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಸ್ವಲ್ಪವೂ ಕರುಣೆನೆ ಇಲ್ಲದ ಹಾಗೆ ಕಾಣಿಸುತ್ತದೆ. ಹಲ್ಲೆಗೊಳಗಾದ ಕೂಲಿ ಕಾರ್ಮಿಕರು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸ್ವಲ್ಪವೂ ಕರುಣೆ ತೋರಿಸದೇ ಹಲ್ಲೆ ಮಾಡಿರುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ದುಷ್ಕರ್ಮಿಗಳ ಪರ ಯಾವ ನ್ಯಾಯವಾದಿಗಳು ಜಾಮೀನು ಕೊಡಿಸಲು ಮುಂದಾಗಬಾರದು ಎಂದು ನ್ಯಾಯವಾದಿಗಳಲ್ಲಿ ಮನವಿ ಮಾಡುತ್ತೇನೆ. ಹಲ್ಲೆಗೊಳಗಾದ ಕಾರ್ಮಿಕರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವುದಾಗಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.