ಆದಿಶೇಷ ಸಂಸ್ಥಾನ ಹಿರೇಮಠದ ೨೯ನೇ ಜಾತ್ರಾ ಮಹೋತ್ಸವ | ಡಾ.ಚಂದ್ರಶೇಖರ ಶ್ರೀಗಳ ೫೪ನೇ ವರ್ಷದ ಅನುಷ್ಠಾನದ ಸುರ್ವಣ ಮಹೋತ್ಸವ | ಪುರಾಣ ಮಹಾ ಮಂಗಲ | ಧರ್ಮಸಭೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರ ಪಂಚ ಗ್ಯಾರಂಟಿ ಯೋಜನೆಗೆ ಬಹಳಷ್ಟು ದುಡ್ಡು ಖರ್ಚಾಗುವ ಕಾರಣ ಆಯಾ ಭಾಗದ ಕಾರ್ಯ ಎಷ್ಟು ನಡೆಯಬೇಕಿತ್ತು ಅಷ್ಟು ಕಾರ್ಯ ನಡೆಯುತ್ತಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಷಾದವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೇ ಜಾತ್ರಾ ಮಹೋತ್ಸವ ಹಾಗೂ ರಾಜಯೋಗಿ ಡಾ.ಚಂದ್ರಶೇಖರ ಶ್ರೀಗಳವರ ೫೪ನೇ ವರ್ಷದ ಅನುಷ್ಠಾನದ ಸುರ್ವಣ ಮಹೋತ್ಸವ, ಶ್ರೀ ರೇವಣಸಿದ್ದೇಶ್ವರ ಮಹಾಪುರಾಣ ಮಹಾ ಮಂಗಲ ಹಾಗೂ ಧರ್ಮಸಭೆಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧನ ಕನಕಾದಿ ವಸ್ತುಗಳು ಬಹಿರಂಗದ ಸಿರಿ. ಸತ್ಯ ಶಾಂತಿಗಳು ಆಂತರಿಕ ಸಿರಿ. ಹೊರಗಿನ ಸಿರಿಯನ್ನು ಕಳ್ಳರು ಕದಿಯಬಹುದು. ಆದರೆ ಅಂತರಂಗದ ಗುಣ ಸಿರಿಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮ ಅಂತರಂಗ ಬಹಿರಂಗ ಶುದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ ಎಂದರು.
ನೇತೃತ್ವ ವಹಿಸಿದ ಆದಿಶೇಷ ಹಿರೇಮಠದ ವೀರರಾಜೇಂದ್ರ ಸ್ವಾಮಿಗಳು, ಸಮ್ಮುಖವನ್ನು ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಭಗವಂತ ನೀಡಿದ ಸಂಪತ್ತು ಅಮೂಲ್ಯ. ನೆಲ ಜಲ ಬೆಂಕಿ ಗಾಳಿ ಬಯಲು ಕೊಟ್ಟ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಬದುಕಿ ಬಾಳುವ ಮನುಷ್ಯನಿಗೆ ಉಜ್ವಲ ಬೆಳಕನ್ನು ತೋರುತ್ತವೆ. ಮನುಷ್ಯನಿಗೆ ಮರೆವು-ಅರಿವು ಎರಡೂ ಇದೆ. ಮರೆಯುವುದು ಮನುಷ್ಯನ ಸ್ವಭಾವ. ಮರೆತು ಹೋದುದನ್ನು ನೆನಪು ಮಾಡುವುದೇ ಗುರುವಿನ ಧರ್ಮವಾಗಿದೆ. ಆದಿಶೇಷ ಹಿರೇಮಠದ ಜಾತ್ರಾ ಮಹೋತ್ಸವ ಭಕ್ತರ ಬಾಳಿಗೆ ಬೆಳಕನ್ನು ತೋರಲೆಂದರು.
ಈ ಧರ್ಮ ಸಮಾರಂಭದಲ್ಲಿ ಆಲೂರು ಸಂಸ್ಥಾನ ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯರು, ನಾಲವಾರದ ಶಿವಯೋಗಿ ಚಂದ್ರಶೇಖರ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಕೆಂಬಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಶಾಸಕ ಅಶೋಕ ಮನಗೂಳಿ ಅವರ ಧರ್ಮಪತ್ನಿ ನಾಗರತ್ನ ಮನಗೂಳಿ ಮಾತನಾಡಿದರು.
ಹುಬ್ಬಳ್ಳಿಯ ಕೃಷಿಕರಾದ ಅರವಿಂದ ಕೇಶ್ವಾಪುರ, ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟಿ, ಕಲಬುರ್ಗಿಯ ಉಪನ್ಯಾಸಕಿ ಜಯಶ್ರೀ ಬಿರಾದಾರ, ಭಾಗ್ಯಜ್ಯೋತಿ ವೃದ್ಧಾಶ್ರಮದ ಗಂಗಮ್ಮ ಗೋರೇಗೊಳ್, ಉಪನ್ಯಾಸಕ ಪ್ರಶಾಂತ ದೇವಣಿ ಹಾಗೂ ಕುಮಠೆ ಪ್ರಗತಿಪರ ರೈತ ಸುರೇಶ ಬಡಿಗೇರ ಇವರಿಗೆ “ಆದಿಶೇಷ ಶ್ರೀ” ಪ್ರಶಸ್ತಿ ಪ್ರದಾನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ನೆರವೇರಿಸಿ ಶುಭ ಹಾರೈಸಿದರು.
ಈ ವೇಳೆ ಅಶೋಕ ವಾರದ, ಸತೀಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ನಾಗರಾಜ ಪಾಟೀಲ, ಚಂದ್ರಶೇಖರ ಅರಕೇರಿ, ಬಸವರಾಜ ನಾಗನೂರ, ಮಹೇಶ್ವರಿ ವಾಲಿ, ಎಂ.ಎಂ.ಹಂಗರಗಿ, ಚಂದ್ರಶೇಖರ ನಾಗರಬೆಟ್ಟಿ, ಶಿವಾನಂದ ಬಡಾನೂರ, ಪಂಡಿತ ಯಂಪುರೆ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ ಸೇರಿದಂತೆ ತಾಲೂಕಿನ ವಿವಿಧ ಭಾಗದ ಶ್ರೀಮಠದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಇದ್ದರು.
“ತಮ್ಮ ಪಕ್ಷದ ಹಾಗೂ ವಿರೋಧ ಪಕ್ಷದ ಶಾಸಕರಿಗೂ ಸಹ ಈ ಯೋಜನೆಯಿಂದ ಸರಿಯಾಗಿ ಅನುದಾನ ದೊರೆಯುತ್ತಿಲ್ಲ. ಹಾಗಾಗಿ ಸರಕಾರ ಈ ಯೋಜನೆಯ ವಿಮರ್ಶೆ ಮಾಡಬೇಕು. ಮಾಡದಿದ್ದಲ್ಲಿ ಆಯಾ ಭಾಗಕ್ಕೆ ಇನ್ನಷ್ಟು ಕಷ್ಟಗಳು ಎದುರಾಗಲಿವೆ. ಅಭಿವೃದ್ಧಿ ಕಾರ್ಯಕ್ಕೆ ಶಾಸಕರಿಗೆ ಅನುದಾನ ನೀಡಿದರೆ ಅವರು ಮತದಾರರಿಗೆ ಮುಖ ತೋರಿಸಲು ಸಾಧ್ಯವಾಗುತ್ತದೆ.”
– ಡಾ.ವೀರಸೋಮೇಶ್ವರ
ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು