ನಾಗಠಾಣ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳಿ ಪರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಂಬಗಿ, ಅಂಕಲಗಿ, ಆಹೇರಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಮತಯಾಚಿಸಿದ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ನಾಗಠಾಣ ವಿಧಾನಸಭಾ ಕ್ಷೇತ್ರದ ಪ್ರಗತಿಗೆ ಜನತೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು, ಈ ಭಾಗಕ್ಕೆ ಹೊರ್ತಿ ರೇವಣಸಿದ್ದೇಶ್ವರ ಯೋಜನೆ ಮೂಲಕ ಬಿಜೆಪಿ ಸರ್ಕಾರ ಅನ್ನದಾತನ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ, ಹೀಗಾಗಿ ಜನತೆ ಬಿಜೆಪಿಗೆ ಇನ್ನೊಮ್ಮೆ ಆಶೀರ್ವದಿಸಿದರೆ ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಪರಂಪರೆ ಮುಂದುವರೆಯಲು ಸಾಧ್ಯವಾಗುತ್ತದೆ, ಬಿಜೆಪಿ ಈ ಬಾರಿ ನಿಷ್ಠಾವಂತ ಹಾಗೂ ಬೇರುಮಟ್ಟದ ಕಾರ್ಯಕರ್ತನಿಗೆ ಟಿಕೇಟ್ ನೀಡಿದೆ, ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳ್ಳಿ ಅವರಿಗೆ ಜನರೇ ಆಸ್ತಿ, ಜನರೇ ಶಕ್ತಿ. ಹೀಗಾಗಿ ಜನತೆ ಆಶೀರ್ವಾದ ರೂಪದ ಮತ ಕರುಣಿಸುವ ಮೂಲಕ ವಿಧಾನಸಭೆಗೆ ಕಳುಹಿಸಬೇಕು, ಜನಪರ ಸ್ಪಂದನೆಯುಳ್ಳ ಐಹೊಳ್ಳೆ ಅವರಿಗೆ ಮತ ನೀಡಬೇಕು ಎಂದು ಕೋರಿದರು. ಬಿಜೆಪಿ ಜನಪರ ಚಿಂತನೆಯುಳ್ಳ ಪಕ್ಷವಾಗಿದೆ, ಉಳಿದ ಪಕ್ಷದಂತೆ ಬಿಜೆಪಿ ಪ್ರಣಾಳಿಕೆ ರಚಿಸಿಲ್ಲ, ಬೇರುಮಟ್ಟದಿಂದ ಅಧ್ಯಯನ ಮಾಡಿ, ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಪ್ರಕಟಿಸಿದೆ ಹೊರತು ಎಸಿ ರೂಂನಲ್ಲಿ ಕುಳಿತು ಪ್ರಣಾಳಿಕೆ ರಚಿಸಿಲ್ಲ, ಹೀಗಾಗಿ ಪ್ರಣಾಳಿಕೆಯೇ ಜನತಾ ಪ್ರಣಾಳಿಕೆಯಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳಿ ಮಾತನಾಡಿ, ನಾನು ಬಡವ, ಆದರೆ ನಿಮ್ಮ ಪ್ರೀತಿ, ವಿಶ್ವಾಸ, ವಾತ್ಸಲ್ಯದ ಸಂಪತ್ತು ನನ್ನ ಬಳಿ ಇದೆ, ಈಗ ನಿಮ್ಮ ಆಶೀರ್ವಾದ ರೂಪ ದೊರೆತರೆ ನಿಮ್ಮ ಸೇವೆ ಮಾಡುವ ಸೌಭಾಗ್ಯವೂ ನನ್ನದಾಗಲಿದೆ, ಈ ಬಾರಿ ಆಶೀರ್ವಾದ ಮಾಡಿ ಎಂದು ಕೋರಿದರು.
ಈ ಸಂದರ್ಬದಲ್ಲಿ ಜಿ.ಪಂ ಸದಸ್ಯರಾದ ನವೀನ ಅರಕೇರಿ, ಸಚಿನ ಕುಮಸಿ, ಸಿದ್ದು ಗೆರಡೆ, ರಾಜು ಕೆರೂರ, ಸಂಗಮೇಶ ಗುದಳೆ, ಜಕರಾಯ ಪೂಜಾರಿ ಸೇರಿದಂತೆ ಹಲವರಿದ್ದರು.