ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಾ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಈರಣ್ಣ ಚನ್ನಬಸಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಹೇಬಗೌಡ ಶಾಂತಪ್ಪ ಉತ್ನಾಳ (ಯಾಳವಾರ) ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಚೇತನ ಬಾವಿಕಟ್ಟಿ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ನಂತರ ಬಸವೇಶ್ವರ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ ಸನ್ಮಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಬೇಕೆಂದು ಸಾಕಷ್ಟು ಪ್ರಯತ್ನಿಸಿದರೂ ನಾನು ಮಾಡಿರುವ ರೈತರ ಸೇವೆ, ವಿಶ್ವಗುರು ಬಸವೇಶ್ವರರ ಕೃಪಾಶೀರ್ವಾದದಿಂದ ಆಯ್ಕೆಯಾಗಿದ್ದೇನೆ. ಸಚಿವ ಶಿವಾನಂದ ಪಾಟೀಲ ಹಾಗೂ ನನ್ನ ನಡುವೆ ಯಾವಾಗಲೂ ಆತ್ಮೀಯ ಬಾಂಧವ್ಯವಿದೆ. ಈ ಬಾಂಧವ್ಯವನ್ನು ಯಾರೂ ಕೆಡಿಸಲು ಸಾಧ್ಯವಿಲ್ಲ. ಮತಕ್ಷೇತ್ರದಲ್ಲಿ ಯಾವಾಗಲೂ ನಾವು ಕೂಡಿಕೊಂಡು ಕ್ಷೇತ್ರದ ಜನತೆಯ ಸೇವೆ ಮಾಡುತ್ತೇವೆ. ನಮ್ಮ ಬ್ಯಾಂಕಿನ ಎಲ್ಲ ನಿರ್ದೇಶಕರು ಒಮ್ಮತದಿಂದ ನನ್ನನ್ನು ಮೂರನೆಯ ಬಾರಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಎಲ್ಲ ನಿರ್ದೇಶಕರ, ಸದಸ್ಯರ ಸಹಕಾರ ಮತ್ತು ವಿಶ್ವಾಸದೊಂದಿಗೆ ಬ್ಯಾಂಕ್ ಇನ್ನಷ್ಟು ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತ ಕಲ್ಯಾಣಕ್ಕಾಗಿ ಬಿಡುಗಡೆಯಾಗುವ ಅನುದಾನವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಲು ಅದ್ಯತೆ ನೀಡಲಾಗುವುದು. ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಬಹಳ ವರ್ಷಗಳಿಂದ ಸುಸ್ತಿಯಾಗಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರ ಜಮೀನು ಅಭಿವೃದ್ಧಿಗಾಗಿ ಹೆಚ್ಚಿನ ಸಾಲ ಸೌಲಭ್ಯ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಎಲ್ಲರ ಸಹಕಾರದೊಂದಿಗೆ ರೈತರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಅತಿಥಿ ಸ್ಥಾನ ವಹಿಸಿದ್ದ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಶಿವನಗೌಡ ಬಿರಾದಾರ ಮಾತನಾಡಿದ ಅವರು, ಸಹಕಾರಿ ಕ್ಷೇತ್ರ ಆರೋಗ್ಯಕರವಾಗಿ ಬೆಳೆದರೆ ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಸಮಗ್ರ ಗ್ರಾಮಿಣ ಅಭಿವೃದ್ಧಿ ಸಾಧ್ಯ ಎಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರು ಪ್ರತಿಪಾದಿಸಿದ್ದರು. ಅವರ ಪ್ರೋತ್ಸಾಹದಲ್ಲಿ ಗುಜರಾತ್‌ನಲ್ಲಿ ಆರಂಭವಾದ ಅಮುಲ್ ಇಂದು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರೆಂದರೆ 120 ಹಳ್ಳಿಗಳಲ್ಲಿರುವ ರೈತರ ಪ್ರತಿನಿಧಿ. ರೈತರ ಹೊಲಗಳ ದುರಸ್ತಿಗೆ ಪಿ ಎಲ್ ಡಿ ಬ್ಯಾಂಕಿನಲ್ಲಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ. ಹತ್ತು ಹಲವಾರು ರೈತರಿಗೆ ಕಲ್ಯಾಣವಾಗುವ ಯೋಜನೆಗಳು ಸಹಕಾರಿ ಕ್ಷೇತ್ರಗಳಲ್ಲಿ ಲಭ್ಯವಿರುತ್ತವೆ. ಈ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಕಾರ್ಯವನ್ನು ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಹೇಳಿದರು.
ಟಿಎಪಿಎಂಎಸ್ ನಿರ್ದೇಶಕ ಸಚಿನಗೌಡ ಪಾಟೀಲ(ಕುದರಿ ಸಾಲವಾಡಗಿ) ಮಾತನಾಡಿ, ಸಹಕಾರಿ ಬ್ಯಾಂಕುಗಳಲ್ಲಿ ಚುನಾವಣೆ ನಡೆಯಬಾರದು. ಚುನಾವಣೆಗಳು ನಡೆದರೆ ಸಹಕಾರಿ ಸಂಘಗಳಿಗೆ ಹೊರೆಯಾಗುತ್ತದೆ. ಚುನಾವಣೆಗಳನ್ನು ಮಾಡುವ ಬದಲು ಸಹಕಾರಿ ಬ್ಯಾಂಕುಗಳ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗಳನ್ನು ಗುರುತಿಸಿ ಅವಿರೋಧ ಮಾಡುವುದು ಒಳ್ಳೆಯದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಕೋ ಆಪ್ ಬ್ಯಾಂಕಿನ ಅಧ್ಯಕ್ಷರಾದ ಲೋಕನಾಥ ಅಗರವಾಲ, ವಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶೇಖರ ದಳವಾಯಿ, ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕ ರಾಮನಗೌಡ ಪಾಟೀಲ ಮಾತನಾಡಿದರು.
ಟಿಎಪಿಎಂಎಸ್ ಅಧ್ಯಕ್ಷ ಶೇಖರಗೌಡ ಪಾಟೀಲ, ಪುರಸಭೆ ಸದಸ್ಯ ರವಿ ಪಟ್ಟಣಶೆಟ್ಟಿ, ಮುಖಂಡರಾದ ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಬಸವರಾಜ ಗೊಳಸಂಗಿ, ಸಂಕನಗೌಡ ಪಾಟೀಲ, ಡಾ,ಬಸವರಾಜ ಕೋಟಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಅಣ್ಣುಗೌಡ ಬಿರಾದಾರ, ಗಿರೀಶ ಚಿಮ್ಮಲಗಿ, ಬಾಬು ಲಮಾಣಿ, ಬಸಪ್ಪ ರೆಡ್ಡಿ, ಶಂಕ್ರಮ್ಮ ಗೌಡರ, ಅಯ್ಯಪ್ಪ ನಂದಿಹಾಳ, ಸಿದ್ರಾಮಪ್ಪ ಎಮ್ಮಿ, ಉಮಾಬಾಯಿ ವಿವೇಕಿ ,ಹುಚ್ಚಪ್ಪ ಬಾಟಿ ,ದಯಾನಂದ ಹೆಬ್ಬಾಳ, ಬ್ಯಾಂಕಿನ ವ್ಯವಸ್ಥಾಪಕ ಎಸ್. ಬಿ. ಮಂತ್ರಿ ಇತರರು ಇದ್ದರು. ನಿವೃತ್ತ ಶಿಕ್ಷಕ ಎಂ.ಜಿ. ಆದಿಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವೇಶ್ವರ ಕೋ ಆಫ್ ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಟಿಎಪಿಎಂಎಸ್ ನಿರ್ದೇಶಕ, ನ್ಯಾಯವಾದಿ ರವಿ ರಾಠೋಡ ನಿರೂಪಿಸಿದರು. ಎಂ. ಬಿ. ತೋಟದ ವಂದಿಸಿದರು.