ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಳಿಕೋಟೆ ತಾಲ್ಲೂಕಿನ ಕಲಕೇರಿ ಗ್ರಾಮದ ದಲಿತ ವ್ಯಕ್ತಿಯ ಕೊಲೆ, ಇಟ್ಟಿಗೆ ತಯಾರಿಕಾ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಘಟನೆಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಪದಾಧಿಕಾರಿಗಳು ಉಪತಹಶೀಲ್ದಾರ ಸುರೇಶ ಮ್ಯಾಗೇರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ ದಸಂಸ ಪದಾಧಿಕಾರಿಗಳು ಜಿಲ್ಲೆಯಲ್ಲಿ ಜರುಗಿದ ಎರಡು ಘಟನೆಗಳ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಹುಯೋಗಿ ತಳ್ಳೊಳ್ಳಿ ಮಾತನಾಡಿ, ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿರುವ ವಿಷಯ ಖಂಡನೀಯ. ಮತ್ತು ವಿಜಯಪುರದಲ್ಲಿ ಇಟ್ಟಿಗೆ ತಯಾರಿಕಾ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಯಾಗಿರುವುದು ಸಹ ಅಮಾನವೀಯ ಕೃತ್ಯವಾಗಿದೆ.
ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳು ನಡೆದಿದ್ದು, ಹಾಡು ಹಗಲೇ ಇಂತಹ ದುಷ್ಕೃತ್ಯ ನಡೆಯುತ್ತಿವೆ. ಆಗಾಗ ದಲಿತರ ಮೇಲೆ ಅನ್ಯಾಯವಾಗುತ್ತಿದ್ದು, ರಕ್ಷಣೆ ಇಲ್ಲವಾಗಿದೆ. ಕೂಡಲೇ ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಕೊಳ್ಳಬೇಕು. ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು, ಜಿಲ್ಲಾಡಳಿತ ಸಂಬಂಧಿಸಿದ ಇಲಾಖೆಗೆ ಅಗತ್ಯ ಮಾರ್ಗದರ್ಶನ ನೀಡಬೇಕೆಂದು ಆಗ್ರಹಿಸಿದರು.
ತಾಲ್ಲೂಕು ಸಂಚಾಲಕ ಬಸವರಾಜ ತಳಕೇರಿ, ಸಾಯಬಣ್ಣ ದಳಪತಿ, ರಾಘವೇಂದ್ರ ಗುಡಿಮನಿ, ಪ್ರಶಾಂತ ದೊಡ್ಡಮನಿ, ಕಮಾಲ ಕಾಟಮನಳ್ಳಿ, ರಾವುತ್ ತಳಕೇರಿ, ಮುಸಾ ಕೊಳಗೇರಿ, ರಾಜು ಜಿರಂಕಲಗಿ, ಬಸವರಾಜ ಖಾನಾಪೂರ ಇದ್ದರು.