ವಿಜಯಪುರ: ಚುನಾವಣಾ ಕಾರ್ಯ ಅತ್ಯಂತ ಜವಾಬ್ದಾರಿಯುತ ಹಾಗೂ ಅತಿ ಮುಖ್ಯವಾಗಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಯಾವುದೇ ಗೊಂದಲಕ್ಕೊಳಗಾಗದೇ ಆಯೋಗದ ನಿರ್ದೇಶನದನ್ವಯ ಅಚ್ಚುಕಟ್ಟಾಗಿ ಚುನಾವಣಾ ಕಾರ್ಯ ನಿರ್ವಹಿಸುವಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿತ ಪ್ರಿಸೈಡಿಂಗ್, ಸಹಾಯಕ ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಮಂಗಳವಾರ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡ ಎರಡನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿ-ಸಿಬ್ಬಂದಿಗಳ ಪಾತ್ರ ಅತಿಮುಖ್ಯವಾಗಿರುತ್ತದೆ. ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಪ್ರತಿಯೊಂದು ವಿಷಯವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದ ಅವರು ಮಸ್ಟರಿಂಗ್, ಡಿಮಸ್ಟರಿಂಗ್, ಕಾರ್ಯನಿರ್ವಹಣೆ, ಮತಗಟ್ಟೆಗೆ ತಲುಪಿದ ದಿನ ನಿರ್ವಹಿಸಬೇಕಾದ ಕ್ರಮ, ಮತದಾನ ದಿನ ಅಣುಕು ಮತದಾನ ಸಮಯದಲ್ಲಿ ನಿರ್ವಹಿಸಬೇಕಾದ ಕ್ರಮಗಳು ಹಾಗೂ ಕರ್ತವ್ಯಗಳು, ಸಿಯು, ಬಿಯು & ವಿವಿಪ್ಯಾಟ್ ಜೋಡಿಸುವ ವಿಧಾನ, ಮತದಾನ ನಂತರ ಮತಯಂತ್ರಗಳನ್ನು ಮೊಹರು ಮಾಡಿ ನೈಜ ಮತದಾನಕ್ಕೆ ಅಣಿಯಾಗಿವುದು ಸೇರಿದಂತೆ ಎಲ್ಲ ಅಗತ್ಯ ತರಬೇತಿಯನ್ನು ಪಡೆದು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜಿಲ್ಲೆಯ ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳಿಗೆ ಚುನಾವಣಾ ಕಾರ್ಯಕ್ಕೆ ನಿಯೋಜಿತ ಪ್ರಿಸೈಡಿಂಗ್, ಸಹಾಯಕ ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಇಂದ ಎರಡನೇ ಹಂತದ ತರಬೇತಿ ಆಯಾ ವಿಧಾನಸಭಾ ತರಬೇತಿ ಕೇಂದ್ರಗಳಲ್ಲಿ ಜರುಗಿತು.