ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕಾಲುವೆಗಾಗಿ ವಶಪಡಿಸಿಕೊಂಡಿದ್ದ ರೈತರ ಜಮೀನಿಗೆ, ನ್ಯಾಯಾಲಯ ನೀಡಿದ ತೀರ್ಪಿನಂತೆ ಪರಿಹಾರ ನೀಡದ ಕಾರಣ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಎರಡು ಕಂಪ್ಯೂಟರ್ ಗಳನ್ನು ಬುಧವಾರ ಜಪ್ತಿ ಮಾಡಲಾಯಿತು.
ಬಸವನಬಾಗೇವಾಡಿ ತಾಲ್ಲೂಕಿನ ನಂದಿಹಾಳ ಪಿಎಚ್ ಗ್ರಾಮದ ತಾರಾನಾಥ ದೊಡಬಸಪ್ಪ ದೇಸಾಯಿ ಹಾಗೂ ಮತ್ತೀತರರಿಗೆ ಸೇರಿದ ನಾಲ್ಕು ಎಕರೆ ಜಮೀನನ್ನು ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಾಗಿ ವಶಪಡಿಸಿಕೊಳ್ಳಲಾಗಿತ್ತು.
ಸರ್ಕಾರ ನಿಗದಿಪಡಿಸಿದ ಪರಿಹಾರಕ್ಕಿಂತಲೂ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರೈತ ತಾರಾನಾಥ ಮತ್ತೀತರರು ಕೋರ್ಟ್ ಮೊರೆ ಹೋಗಿದ್ದರು. ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಾಲ್ಕು ಎಕರೆಗೆ ೧.೬೭ ಕೋಟಿ ರೂ ಪರಿಹಾರ ನೀಡುವಂತೆ ಆದೇಶಿಸಿ ೧೫-೦೯-೨೦೨೧ ರಲ್ಲಿ ತೀರ್ಪು ನೀಡಿತ್ತು. ಪರಿಹಾರ ಹಣ ರೈತರಿಗೆ ನೀಡುವವರೆಗೂ ವಾರ್ಷಿಕ ೧೫% ಬಡ್ಡಿಯನ್ನು ವಿಧಿಸಿತ್ತು. ತೀರ್ಪು ಪ್ರಕಟಿಸಿ ನಾಲ್ಕು ವರ್ಷ ಕಳೆದರೂ ರೈತನಿಗೆ ಪರಿಹಾರ ನೀಡದ ಕಾರಣ ಅದೇ ನ್ಯಾಯಾಲಯ, ವಿಶೇಷ ಭೂಸ್ವಾಧಿನಾಧಿಕಾರಿಗಳ ಕಾರ್ಯಾಲಯದ ಕಂಪ್ಯೂಟರ್ ಜಪ್ತಿಗೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶದಂತೆ ಬುಧವಾರ, ರೈತರ ಪರ ವಕೀಲ ಎಂ.ಬಿ. ಅಲದಿ ಹಾಗೂ ನ್ಯಾಯಾಲಯದ ಬೇಲಿಫ್ ಸಮ್ಮುಖದಲ್ಲಿ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಎರಡು ಕಂಪ್ಯೂಟರ್ ಜಪ್ತಿ ಮಾಡಿ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಯಿತು.
ಭೂಸ್ವಾಧೀನಕ್ಕೆ ವಶಪಡಿಸಿಕೊಂಡ ರೈತರಿಗೆ ಶೀಘ್ರವೇ ಪರಿಹಾರ ನೀಡಬೇಕು ಇಲ್ಲದಿದ್ದರೇ, ವಿನಾಃ ಕಾರಣ ವಾರ್ಷಿಕ ಶೇ ೧೫ ರಷ್ಟು ಬಡ್ಡಿ ನೀಡಬೇಕಾಗುತ್ತದೆ, ಇದು ಸರ್ಕಾರಕ್ಕೆ ಅನಗತ್ಯ ಹೊರೆಯಾಗುತ್ತದೆ, ಈ ಬಗ್ಗೆ ಸರ್ಕಾರ, ಜಲಸಂಪನ್ಮೂಲ ಸಚಿವರು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ವಕೀಲ ಎಂ.ಬಿ. ಅಲದಿ ತಿಳಿಸಿದರು.