ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಂಜಿನಿಯರ್, ಲೈನ್ ಮ್ಯಾನ್ ಗಳು ಹಾಗೂ ಜನಪ್ರತಿನಿಧಿಗಳು ನೇರ ಸಂಪರ್ಕಕ್ಕೆ ಬರುವುದರ ಮೂಲಕ ವಿದ್ಯುತ್ ತೊಂದರೆಗಳನ್ನು ಸರಿಪಡಿಸಬಹುದು ಎಂದು ರಾಜ್ಯ ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ರಾಜ್ಯದ ಇಂದನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮದ್ಯಾಹ್ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವಿಜಯಪುರ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳೊಂದಿಗೆ ಇಂಧನ ಇಲಾಖೆಯ ವಿವಿಧ ವಿಷಯಗಳ ಚರ್ಚಿಸುವ ಕುರಿತು ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಕೃಷಿ ವಲಯದ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಪಿಎಂ ಕುಸುಮ ಯೋಜನೆ’ ಅಡಿಯಲ್ಲಿ ಜಮೀನಿನಲ್ಲಿ ಸೋಲಾರ್ ಪಂಪ್ ಅಳವಡಿಸುವ ರೈತರಿಗೆ ೪೦ ಎಕರೆ ಭೂಮಿಯ ಅವಶ್ಯಕತೆ ಇರುವುದಾಗಿ ತಿಳಿಸಿದರು.
೩೫೩ ಕೃಷಿ ಮಾರ್ಗಗಳಿಗೆ ಹಗಲು ವೇಳೆ ೭ಗಂಟೆ ೩ಫೇಸ್ ವಿದ್ಯುತ್‌ನ್ನು ಪೂರೈಕೆ ಮಾಡಲಾಗುತ್ತಿದೆ. ೧೬೫ ಮಾರ್ಗಗಳಲ್ಲಿ ಹಗಲು ೪ ಗಂಟೆ ರಾತ್ರಿ ೩ ಮೂರು ಗಂಟೆಗಳ ಕಾಲ ೩ ಫೇಸ್ ವಿದ್ಯುತ್ ನ್ನು ಪೂರೈಕೆ ಮಾಡಲಾಗುತ್ತದೆ. ೪೨ ಕೃಷಿ ಮಾರ್ಗದಲ್ಲಿ ಹಗಲು ೩ ಮತ್ತು ರಾತ್ರಿ ೪ ಗಂಟೆಗಳ ಕಾಲ ೩ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ೪೩ ಕೃಷಿ ಮಾರ್ಗಗಳಲ್ಲಿ ಹಗಲು ೩ ಗಂಟೆ ರಾತ್ರಿ ೩ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇಂಡಿ ಮತಕ್ಷೇತ್ರ ಶಾಸಕ ಯಶವಂತರಾಯಗೌಡ ಮಾತನಾಡಿ, ಜನರಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗಲು ಕ್ರಮ ಕೈಗೊಳ್ಳುವುದರ ಜೊತೆಗೆ ವಿದ್ಯುತ್ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿಗೆ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ಪೂರೈಕೆಯಾಗಬೇಕು.
ಹಳೆಯ ಕಂಬ, ವಾಯರ್ ಲೈನ್‌ಗಳಿಂದ ಜನರು ಪ್ರಾಣ ಕಳೆದುಕೊಂಡಂತಹ ಘಟನೆಗಳು ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ ಅದನ್ನು ತಪ್ಪಿಸಲು ಹಳೆಯ ಕಂಬ ಹಾಗೂ ಲೈನ್‌ಗಳನ್ನು ತೆಗೆದು ಹೊಸ ಲೈನ್ ಗಳನ್ನು ಅಳವಡಿಸಿದರೆ ಜನರ ಪ್ರಾಣ ಕಾಪಾಡುವುದಕ್ಕೆ ಸಹಕಾರಿಯಾಗುತ್ತದೆ.
ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಕಬ್ಬಿಣ ಕಾರ್ಖಾನೆಗಳು, ರೈತರು ಕಾರ್ಖಾನೆಗೆ ಪೂರೈಸಿದ ಕಬ್ಬಿಣ ಬಾಕಿ ಉಳಿದ ಬಿಲ್ಲು ಶೀಘ್ರ ಪಾವತಿಸುವಂತೆ ಸಚಿವರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಅಶೋಕ ಮಲ್ಲಪ್ಪ ಮನಗೂಳಿ, ಭೀಮನಗೌಡ (ರಾಜುಗೌಡ) ಬಸನ ಗೌಡ ಪಾಟೀಲ್, ವಿಠ್ಠಲ್ ದೊಂಡಿಬಾ ಕಟಕದೊಂಡ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಮಹಾನಗರ ಪಾಲಿಕೆಯ ಮಹಾ ಪೌರರಾದ ಮಹೇಜಬಿನ ಅಬ್ದುಲರಜಾಕ್ ಹೊರ್ತಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕನಾನ ಅಬ್ದುಲ್ ಹಮೀನ್ ಮುಶ್ರೀಪ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ ಕುಮಾರ ಪಾಂಡೆ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ವೈಶಾಲಿ ಎಂ.ಎಲ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ತಾಂತ್ರೀಕ ನಿರ್ದೇಶಕ ಜಗದೀಶ ಸಾವಳಗಿ, ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.