ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಡೊಂಕಮಡು ಗ್ರಾಮ, ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಆಶ್ರಯ ಕಾಲೋನಿ ಮತ್ತು ಹಡಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಬುಧವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೊಂಕಮಡು ಗ್ರಾಮಕ್ಕೆ ಬಸ್ಸಿನ ಕೊರತೆ, ಉದ್ಯೋಗ ಖಾತ್ರಿ ಬಗ್ಗೆ ಎಷ್ಟು ಜನಕ್ಕೆ ಕೆಲಸಾ ಕೊಡ್ತಾರೆ ಏನು ಅಂತಾ ಸರಿಯಾದ ಮಾಹಿತಿ ಯಾವ ಸಾರ್ವಜನಿಕರಿಗೂ ಇಲ್ಲ. ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ, ಶೌಚಾಲಯಗಳ ಕೊರತೆ, ಮುಖ್ಯ ರಸ್ತೆಯ ಸೇತುವೆ ತೊಂದರೆ, ಮೊಸಳೆ ಇದೆ ಎಂದು ದೂರಿದರೂ ಯಾರೊಬ್ಬರೂ ಪರಿಶೀಲಿಸದಿರುವದು, ಎಸ್‌ಸಿ ಎಸ್‌ಟಿ ಕಾಲೋನಿಗಳಲ್ಲಿ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ, ಲೈಬ್ರರಿ ಇಲ್ಲ, ಜಲಜೀವನ ಮಿಶನ್ ಮಿಶನ್ ಅಡಿ ಇರುವ ಪೈಪ್‌ಗಳಲ್ಲಿ ಎಲ್ಲೂ ನೀರು ಬರೊಲ್ಲ. ಕೋಟ್ಯಾಂತರ ರೂಪಾಯಿಗಳ ಎಸ್‌ಸಿ ಎಸ್‌ಟಿ ಫಂಡ್ಸ್ ಏನ್ಮಾತ್ತಿದ್ದಾರೆೆ? ಎಲ್ಲೆಲ್ಲಿಗೆ ಡೈವರ್ಟ ಮಾಡ್ತಿದ್ದಾರೆ? ಯಾರ ತಗೋತಾರೆ? ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಆಶ್ರಯ ಕಾಲೋನಿಯಲ್ಲಿರುವ ಮನೆಗಳಲ್ಲಿ ೨೦ ವರ್ಷದಿಂದ ಜನತೆ ವಾಸ ಮಾಡುತ್ತಿದ್ದಾರೆ. ಮಳೆ ಬಂದು ಮನೆಗಳಲ್ಲಿ ನೀರು ಸೋರಿ ಪಕ್ಕದ ಮಸೀದಿಯಲ್ಲಿ ಮಲಗುತ್ತಿದ್ದರೂ ಇಲ್ಲಿಯವರೆಗೂ ಯಾರೊಬ್ಬ ಅಧಿಕಾರಿಗಳೂ ಹೋಗಿ ಭೇಟಿ ನೀಡಿಲ್ಲ. ಅವರಿಗೆ ಹಕ್ಕು ಪತ್ರಗಳನ್ನು ಕೊಡೊ ವ್ಯವಸ್ಥೆ ಮಾಡಿಲ್ಲ. ಹತ್ತಿರದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ರೆ ಶೌಚಾಲಯಗಳ ನಿರ್ವಹಣೆ ಇಲ್ಲ. ಎಲ್ಲ ಹೆಣ್ಣು ಮಕ್ಕಳು ಶೌಚಕ್ಕೆ ಬಯಲು ಪ್ರದೇಶವನ್ನು ಬಳಸ್ತಿದ್ದಾರೆ. ಸರ್ಕಾರಿ ಶಾಲೆಯ ಕಂಪೌಂಡ ಒಳಗೆ ಊರಿನ ಕಕ್ಕಸ ಚರಂಡಿ ಮಾಡಿಕೊಂಡಿದ್ದಾರೆ ಇದೊಂದು ದೊಡ್ಡ ದುರಂತ. ಇಲ್ಲಿ ಒಂದಲ್ಲ ಎರಡಲ್ಲ ಸಮಸ್ಯೆಗಳ ಸರಮಾಲೆಯೇ ಇದೆ. ತಹಸೀಲ್ದಾರ ಸೇರಿದಂತೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ, ಸ್ಪಂದಿಸಿಲ್ಲ. ಒಟ್ಟಾರೆ ಪಟ್ಟಣದಲ್ಲಿ ಮೂರೇ ಅಂಗನವಾಡಿ ಕಟ್ಟಡಗಳಿವೆಯಂತೆ. ಅವುಗಳನ್ನ ನೋಡಿದರೆ ಯಾವಾಗ ಬಿದ್ದೋಗತ್ವವೆ ಅನ್ನೋ ಹಾಗಿವೆ. ಅಧಿಕಾರಿಗಳಿಗೆ ಕೇಳಿದ್ರೆ ಏನೋ ಒಂದು ಹೇಳುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಯಾವ ಶಾಲೆಯನ್ನೂ ಭೇಟಿ ಮಾಡೋದಿಲ್ಲ ಇದೆಲ್ಲ ದೂರುಗಳನ್ನು ಹೊತ್ತು ವಿಜಯಪುರಕ್ಕೆ ಹೋಗುತ್ತಿದ್ದೇನೆ. ಆದಷ್ಟು ಎಲ್ಲವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಶುಕ್ರವಾರ ಜಿಲ್ಲಾ ಮಟ್ಟಧಿಕಾರಿಗಳ ಜೊತೆ ಸಭೆ ನಡೆಸಿ ಅಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆ ಹರೆಸಲು ಪ್ರತ್ನಿಸುತ್ತೇನೆ ಎಂದರು.
ಬೇಸರ ವ್ಯಕ್ತಪಡಿಸಿದ ಅಧ್ಯಕ್ಷೆ
ಮಹಿಳಾ ಆಯೋಗದ ಅಧಿಕಾರ ವ್ಯಾಪ್ತಿ ಹೆಣ್ಣುಮಗಳ ಮೂಲಭೂತ ರಕ್ಷಣೆ ಒದಗಿಸೋದು. ಸರ್ಕಾರದ ಸಾಕಷ್ಟು ಯೋಜನೆಗಳಿವೆ. ಕೊಟ್ಯಾಂತರ ಅನುದಾನ ಬರುತ್ತೆ ಅದೆಲ್ಲ ಬಡವರ ಮನೆ ಸೇರಿದ್ರೆ ಸ್ವರ್ಗ ಅಲ್ಲೇ ಸಿಗುತ್ತೆ. ಸಿಸ್ಟಮ್ ಎಲ್ಲ ಫೇಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬೇಸರ ವ್ಯಕ್ತಪಡಿಸಿದರು.
ಜ.೨೪ ರಂದು ವಿಜಯಪುರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ಇದೆ. ಜಿಲ್ಲೆಯ ಯಾರೇ ಹೆಣ್ಣುಮಕ್ಕಳ ಏನೇ ಸಮಸ್ಯೆ ಇದ್ದರೂ ಇಲ್ಲಿ ಬಂದು ಭೇಟಿ ಮಾಡಿದ್ರೆ ಅವರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಾನು ಮಾಡುತ್ತೇನೆ.”
– ನಾಗಲಕ್ಷ್ಮಿ ಚೌಧರಿ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ.