ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚಿಗೆ ಜಿಲ್ಲೆಯ ಬಸವನಗರದ ಖೇಮು ರಾಠೋಡ ಮಾಲೀಕತ್ವದ ಇಟ್ಟಂಗಿ ಬಟ್ಟಿಯಲ್ಲಿ ನಡೆದ ಹಲ್ಲೆ ಗಾಯಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರ ಯೋಗ್ಯಕ್ಷೇಮವನ್ನು ವಿಚಾರಿಸಿದರು. ಕಾರ್ಮಿಕರಿಗೆ ಅವರಿಗೆ ಪರಿಹಾರ ಹಣ ಮತ್ತು ಉದ್ಯೋಗ ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಇಟ್ಟಂಗಿ ಬಟ್ಟಿ ನೊಂದಣಿಯನ್ನು ರದ್ದು ಪಡಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಉಳಿದವರ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿದೆ. ಕಾಲಕಾಲಕ್ಕೆ ಜಿಲ್ಲೆಯಲ್ಲಿರುವ ಇಟ್ಟಂಗಿ ಬಟ್ಟಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಯೋಗಕ್ಷೇಮ ವಿಚಾರಿಸಲು ಸಮೀತಿ ರಚಿಸಲಾಗಿದ್ದು, ತಹಶೀಲ್ದಾರ, ತಾಲೂಕು ಮುಖ್ಯ ನಿರ್ವಾಕ ಅಧಿಕಾರಿ, ಕಾರ್ಮಿಕಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಸ್ಥಳೀಯ ಸಂಘಟಕರು ಸೇರಿದಂತೆ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಶವಾಗಾರ ಹಾಗೂ ಇತರ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂತೋಷ ಗುಣಾರಿ ಉಪಸ್ಥಿತರಿದ್ದರು.