ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ | ಆಪ್ತ ಸ್ನೇಹಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ
ಬೆಂಗಳೂರು: ಒಂದು ಕಾಲದಲ್ಲಿ ತಮ್ಮ ಆಪ್ತ ಸ್ನೇಹಿತರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧವೇ ವಾಗ್ದಾಳಿ ನಡೆಸಿದ ಮಾಜಿ ಸಚಿವ ಬಿ ಶ್ರೀರಾಮುಲು ಅವರು, ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಬಂದಿರುವ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ನಿನ್ನೆ ಸಂಜೆ ಕೋರ್ ಕಮಿಟಿ ಸಭೆ ನಡೆಸಿದರು.
ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀರಾಮುಲು ವಿರುದ್ಧವೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಸದಾನಂದ ಗೌಡ ಸಮಿತಿ ಉಪ ಚುನಾವಣೆ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಶ್ರೀರಾಮುಲು, ಸಭೆಯಲ್ಲೇ ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಉಪಚುನಾವಣೆಯಲ್ಲಿ ನಾನು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕೇಳಿದ್ರೆ ನನ್ನ ಕೆಲಸದ ಬಗ್ಗೆ ಎಲ್ಲರೂ ಹೇಳುತ್ತಾರೆ. ನಾನು ಕೆಲಸ ಮಾಡಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ರಾಧಾಮೋಹನ್ ದಾಸ್ ಆರೋಪದಿಂದ ನನಗೆ ನೋವಾಗಿದೆ ಎಂದಿದ್ದಾರೆ.
ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಶ್ರೀರಾಮುಲು, ಒಂದು ಕಾಲದ ತಮ್ಮ ಆಪ್ತ ಸ್ನೇಹಿತನ ವಿರುದ್ಧ ಕಿಡಿಕಾರಿದರು.
ಮೊದಲೇ ಕಮಲ ಮನೆ ಕೊತ ಕೊತನೆ ಕುದಿಯುತ್ತಿದೆ. ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಪಕ್ಷದೊಳಗೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದರ ಮಧ್ಯೆ ಶ್ರೀರಾಮುಲು ಅವರ ಅಸಮಾಧಾನ ಪಕ್ಷದೊಳಗೆ ತೀವ್ರ ಸಂಚಲನ ಮೂಡಿಸಿದೆ.
![1000944096](https://udayarashminews.com/wp-content/uploads/2025/01/1000944096.jpg)
“ನನ್ನ ಬಗ್ಗೆ ತಿಳಿದುಕೊಂಡು ರಾಧಾಮೋಹನ್ ದಾಸ್ ಮಾತನಾಡಬೇಕಿತ್ತು. ಅವರು ಉತ್ತರಪ್ರದೇಶ ರಾಜ್ಯದವರು ಅವರಿಗೆ ಇಲ್ಲಿನ ಕೆಲವು ವಿಚಾರಗಳು ಗೊತ್ತಿರುವುದಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ಸಭೆಯಲ್ಲಿ ಈ ವಿಚಾರವನ್ನು ರಾಜ್ಯಾಧ್ಯಕರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರೋದು ಸ್ಪಷ್ಟವಾಗಿದೆ.”
– ಬಿ.ಶ್ರೀರಾಮುಲು
ಮಾಜಿ ಸಚಿವ