ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಹಲವಾರು ಭಾಗ್ಯಗಳು ಅವಶ್ಯಕತೆ ಇಲ್ಲ, ಎಂದು ಹಲವಾರು ಜನರು ಈ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಈ ಭಾಗ್ಯಗಳನ್ನೇ ಸದುಪಯೋಗಪಡಿಸಿಕೊಂಡು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಸಮೀಪದ ಕರ್ನಾಟಕ-ಮಹಾರಾಷ್ಟçದ ಗಡಿ ಅಂಚಿನ ಗ್ರಾಮದಲ್ಲಿ ಮಹಿಳೆಯೋಬ್ಬರು ಗೃಹಲಕ್ಷ್ಮಿ ಹಣದಿಂದ ಪತ್ರಾಸ್ ಮನೆಕಟ್ಟಿಕೊಂಡಿದ್ದಾರೆ ಎಂದರೆ ಭಾಗ್ಯಗಳು ಹೇಗೆ ಬಡವರ ಪಾಲಿಗೆ ಆಶಾಕಿರಣವಾಗಿವೆ ಎಂಬುದಕ್ಕೆ ಸಾಕ್ಷಿ.
ಶಿರಾಡೋಣ ಗ್ರಾಮದ ನೀಲಾಬಾಯಿ ಗಂಗಣ್ಣ ಪಾಂಡ್ರೆ ಎಂಬ ಗೃಹಿಣಿ ತಮಗೆ ಬಂದ ಸುಮಾರು ೩೦ ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣದೊಂದಿಗೆ ಇನ್ನಷ್ಟು ಹಣವನ್ನು ಹೊಂದಿಸಿಕೊಂಡು ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಪತ್ರಾಸ್ ಮನೆ ನಿರ್ಮಿಸಿಕೊಂಡಿದ್ದಾರೆ.
ಮನೆಗೆ “ಗೃಹಲಕ್ಷ್ಮಿ ನಿಲಯ” ಎಂದು ನಾಮಕರಣ ಮಾಡಿದ್ದೂ ಅಲ್ಲದೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರವನ್ನು ಅಂಟಿಸಿ. ಕೆಳಗಡೆ ಸಿದ್ಧರಾಮಯ್ಯ ಕೃಪೆ ಎಂದು ಬರೆಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನೀಲಾಬಾಯಿ ದಂಪತಿ, ನಿತ್ಯ ಕೂಲಿ ಮಾಡಿ ಬದುಕುವ ನಮಗೆ ಸ್ವಂತ ಸೂರು ಹೊಂದುವ ಬಹುದಿನಗಳ ಆಶೆ ಇತ್ತು. ಇಂದು ಸರ್ಕಾರದ ಯೋಜನೆಗಳಿಂದ ಕನಸು ನನಸಾಯಿತು ಎಂದು ನಿಟ್ಟುಸಿರು ಬಿಡುತ್ತ ಸಿದ್ಧರಾಮಯ್ಯರಿಗೆ ಶುಭ ಹಾರೈಸಿದರು.