ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: “ಸೋಹಂ ಎಂದಿನಸದೇ ದಾಸೋಹಂ ಎಂದೆನಿಸಯ್ಯ” ಎಂಬ ಪ್ರಭುದೇವರ ಮಾತು ನಮಗೆಲ್ಲ ಮಾದರಿ ಮತ್ತು ಆದರ್ಶವಾಗಿದೆ ಎಂದು ಗದಗ ನ ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವೃತ್ತದ ಬಳಿಯ ಗಾರ್ಡನ್ ಜಾಗೆಯಲ್ಲಿ ವಿಶ್ವ ದಾಸೋಹ ದಿನಾಚರಣೆ ಅಂಗವಾಗಿ ಲಿಂ.ಹಾನಗಲ್ಲ ಕುಮಾರೇಶ್ವರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಮಹಾಸ್ವಾಮಿಗಳು, ತಾಲೂಕಿನ ಮಡಿಕೇಶ್ವರ ಗ್ರಾಮದ ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವೀರಶೈವ ಲಿಂಗಾಯತ ಸಮಾಜ ಮತ್ತು ಜೆಸಿ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶರಣ ಪರಂಪರೆಯಲ್ಲಿ ಕಾಯಕ ಮತ್ತು ದಾಸೋಹ ಎರಡೂ ಜೊತೆ ಜೊತೆಯಾಗಿ ಸಾಗುತ್ತವೆ. ಶರಣರು ತಮ್ಮ ಸುತ್ತಮುತ್ತಲಿನ ಸಮಾಜದ ಕೊಳೆಯನ್ನು ಅಂಟಿಸಿಕೊಳ್ಳದೇ ಪರಿಶುದ್ಧ ಜೀವನವನ್ನು ಸಾಗಿಸಿ ಕಾಯಕ ಮತ್ತು ದಾಸೋಹದ ಮೂಲಕ ಅನುಭಾವದ ಬೆಳಕನ್ನು ಜಗತ್ತಿಗೆ ಬೀರಿದರು. ದಾಸೋಹ ಎನ್ನುವ ಅದ್ಭುತ ಕೊಡುಗೆಯನ್ನು ಜಗತ್ತಿಗೆ ನೀಡಿದರು ಎಂದು ಹೇಳಿದರು.
ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ, ದಾಸೋಹದ ಬೆಳಕು ವಿಶ್ವಕ್ಕೆ ಪಸರಿಸಬೇಕು. ಪ್ರತಿ ಮನೆಗಳು ದಾಸೋಹದ ಮನೆಗಳಾದಲ್ಲಿ ಮಾತ್ರ ಸಿದ್ಧಗಂಗೆಯ ಸ್ವಾಮಿಗಳ ಕನಸು ನನಸಾಗುತ್ತದೆ. ರಾಜಕಾಣಿಗಳು ಮುಂದಿನ ಚುನಾವಣೆಯ ಲೆಕ್ಕಾಚಾರವಿಟ್ಟು ಸಮಾಜ ಸೇವೆ ಮಾಡುತ್ತಾರೆ. ಮುಂದಿನ ಜನರೇಶನ್ ಗೆ ಒಳ್ಳೆಯದಾಗಲಿ ಎನ್ನುವ ದೃಷ್ಟಿಕೋನವಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಮಸೂತಿಯ ಪ್ರಭುಕುಮಾರೇಶ್ವರ ಮಠದ ಪ್ರಭುಕುಮಾರ ಮಾಹಾಸ್ವಾಮಿಗಳು, ಗುಳೇದಗುಡ್ಡದ ಮುರುಘಾ ಮಠದ ಕಾಶೀನಾಥ ಮಹಾಸ್ವಾಮಿಗಳು, ಮರಡಿ ಮಠದ ಖಾಡಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಮಾಜಿ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿ.ಪಿ.ಸಜ್ಜನ, ನಾಗಭೂಷಣ ನಾವದಗಿ, ಪ್ರಭುರಾಜ ಕಲ್ಬುರ್ಗಿ, ರಾಜುಗೌಡ ಗೌಡರ, ರವಿ ಗೂಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲ್ಲ ಪೂಜ್ಯರು ದಿ.ಚನ್ನಣ್ಣ ದೇಸಾಯಿಯವರ ಧರ್ಮಪತ್ನಿ ಲಕ್ಷ್ಮಿ ದೇಸಾಯಿಯವರಿಗೆ ಸ್ಮಾನಿಸಿ ಗೌರವಿಸುವ ಮೂಲಕ ಆಶೀರ್ವದಿಸಿದರು.
ಲೊಟಗೇರಿಯ ಗುರುಮೂರ್ತಿ ದೇವರು, ಬಿಜೆಪಿ ಧುರೀಣೆ ಕಾಶಿಬಾಯಿ ರಾಂಪೂರ, ಎಂ.ಎಸ್.ನಾವದಗಿ ವಕೀಲರು, ಸೋನಿ ಇಲ್ಲೂರ, ಸತೀಶ ಓಸ್ವಾಲ, ವಿಕ್ರಂ ಓಸ್ವಾಲ, ಸತೀಶ ಕುಲಕರ್ಣಿ, ಶಿವನಗೌಡ ಬಿರಾದಾರ, ಬಾಪೂಗೌಡ ಪೀರಾಪೂರ, ಮುತ್ತಣ್ಣ ರಾಯಗೊಂಡ ಸೇರಿದಂತೆ ಹಲವರು ಭಾಗಿಯಾಗಿದ್ದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮತ್ತು ಸಿದ್ದು ಹೆಬ್ಬಾಳ ಕಾರ್ಯಕ್ರಮ ನಿರ್ವಹಿಸಿದರು.
ಹಾನಗಲ್ಲ ಕುಮಾರಸ್ವಾಮಿಗಳ ಸೇವಾ ಕೈಂಕರ್ಯವಿರದಿದ್ದಲ್ಲಿ ಈ ಸಮಾಜದಲ್ಲಿ ಕಾವಿ ಎನ್ನುವ ಶಕ್ತಿ ಇರುತ್ತಿರಲಿಲ್ಲ. ಕಾವಿಗೆ ಶಕ್ತಿ ಸಿಕ್ಕ ಸತ್ಕೀರ್ತಿ ಸಲ್ಲುವದು ಅವರಿಗೆ ಮಾತ್ರ. ಕುಮಾರಸ್ವಾಮಿಗಳ ಮತ್ತು ಸಿದ್ಧಗಂಗಾ ಶ್ರೀಗಳ ವ್ಯಕ್ತಿತ್ವದ ಹಾಗೆ ನಮ್ಮೆಲ್ಲರ ಬದುಕಾಗಬೇಕು.”
– ಚನ್ನವೀರ ಶಿವಾಚಾರ್ಯರು
ಭಾವೈಕ್ಯತಾ ಹಿರೇಮಠ, ಕುಂಟೋಜಿ