ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ರಂಗದ ಬ್ಯಾಂಕುಗಳು, ಸಹಕಾರಿ ಸಂಘಗಳು, ಫೈನಾನ್ಸ್ ಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪಿಎಸ್ಐ ಅಮೋಜ್ ಕಾಂಬ್ಳೆ ಹೇಳಿದರು.
ಪಟ್ಟಣದ ಪೋಲೀಸ್ ಠಾಣೆಯಲ್ಲಿ ಸೋಮವಾರ ಸಾಯಂಕಾಲ ಸಾರ್ವಜನಿಕ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ ಬೀದರ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಹಾಗೂ ಮಂಗಳೂರಿನ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಗಳು ರಾಜ್ಯವನೇ ಬೆಚ್ಚಿಬೀಳಿಸುವಂತೆ ಮಾಡಿದ್ದು. ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕ ಸುರಕ್ಷತೆ ಅಧಿನಿಯಮ -2017 ಅಡಿಯಲ್ಲಿ ಬ್ಯಾಂಕುಗಳು, ಸಹಕಾರಿ ಸಂಘಗಳು ಫೈನಾನ್ಸ್ ಗಳ ಮುಖ್ಯಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು, ಗ್ರಾಹಕರ ಹಿತರಕ್ಷಣೆಗೆ ತರಬೇತಿ ಹೊಂದಿದ ಶಸ್ತ್ರ ಸಜ್ಜಿತ ಹಗಲು ರಾತ್ರಿ ಕಾವಲು ಕರ್ತವ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಡಿವಿಆರ್, ಸಿಸಿಟಿವಿ, ಸೈರನ್, ಸ್ಟ್ರಾಂಗ್ ರೂಮ್, ಹೆಚ್ಡಿಸಿಸಿ ಕ್ಯಾಮೆರಾ, ನೋಟಿಸ್ ಬೋರ್ಡ್, ಇತ್ಯಾದಿ ಸೌಲಭ್ಯಗಳನ್ನು ಅಳವಡಿಸಿಕೊಂಡು ಮುಂದೆ ಆಗಬಹುದಾದ ಅನಾಹುತಗಳ ತಪ್ಪಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾಗವಹಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಕ್ರೈಂ ಪಿಎಸ್ಐ ಹಣಮಂತ್ರಾಯ ಸಿದ್ದಾಪುರ, ಎಸ್ ಬಿಐ , ಕೆನರಾ, ಕರ್ನಾಟಕ ಬ್ಯಾಂಕ್ ಗಳ ಮ್ಯಾನೇಜರ್ ಗಳು, ಕೆಂಭಾವಿ, ನಗನೂರು, ಮಲ್ಲಾ, ಮುದನೂರು ಕೆಜಿಬಿ ಬ್ಯಾಂಕ್ ಗಳ ಮ್ಯಾನೇಜರ್ ಗಳು, ಪಿಕೆಪಿಎಸ್ ಯಾಳಗಿ, ವಿವಿಧ ಸಹಕಾರಿ ಸಂಘಗಳು ಮತ್ತು ಫೈನಾನ್ಸ್ ಗಳು ಮುಖ್ಯಸ್ಥರು, ಸೇರಿದಂತೆ 20 ಕ್ಕೂ ಹೆಚ್ಚು ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಪೋಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.