ಮುದ್ದೇಬಿಹಾಳ : ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಬಸ್ ಒಂದು ಪಲ್ಟಿಯಾಗಿ, ಹಲವರು ಗಾಯಗೊಂಡಿರುವ ಘಟನೆ ತಾಲೂಕಿನ ಹಳ್ಳೂರ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಚುನಾವಣಾ ತರಬೇತಿಗೆಂದು ಮುದ್ದೇಬಿಹಾಳದಿಂದ ಸಿಂದಗಿ ಪಟ್ಟಣಕ್ಕೆ ಅಂದಾಜು ೫೪ ಜನ ಸರ್ಕಾರಿ ನೌಕರರನ್ನು ಹೊತ್ತೊಯ್ಯುತ್ತಿದ್ದ ಸರ್ಕಾರಿ ಬಸ್‌ನ ಎಕ್ಸೆಲ್ ತುಂಡಾಗಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳಾಗಿಲ್ಲ. ಬಹುತೇಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಕೆಲವರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಅತೀ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರುಗಳು ಈ ಬಸ್ಸಿನಲ್ಲಿ ಇದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಅಂಬೂಲೆನ್ಸ್ ಮೂಲಕ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಎದೆ ನೋವು ಸೇರಿದಂತೆ ೧೦ ಮೇಜರ್, ೩ ಹೆಡ್ ಇಂಜುರಿ, ೧ ಶೋಲ್ಡರ್ ಪ್ಯಾಕ್ಚರ್ ಅನುಮಾನದ ಮೇಲೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ತಾಲೂಕು ಆಸ್ಪತ್ರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಚುನಾವಣಾಧಿಕಾರಿ ಚಂದ್ರಕಾAತ ಪವಾರ, ತಹಶೀಲ್ದಾರ ರೇಖಾ ಟಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಬಿಇಓ ಎಸ್.ಜೆ.ನಾಯಕ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ, ಜೆಡಿಎಸ್ ಅಭ್ಯರ್ಥಿ ಬಸವರಾಜ ಭಜಂತ್ರಿ, ಪುರಸಭೆ ಆದ್ಯಕ್ಷೆ ಪ್ರತಿಭಾ ಅಂಗಡಗೇರಿ, ದೇವಿಕಾ ಸುಬ್ಬರಾವ ಫೌಂಡೇಶನ್ ಸಂಸ್ಥಾಪಕಿ ಪಲ್ಲವಿ ನಾಡಗೌಡ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಪುತ್ರ ಭರತಗೌಡ ಪಾಟೀಲ ಭೇಟಿ ನೀಡಿ ಗಾಯಾಳುಗಳ ಕುಶಲೋಪರಿ ವಿಚಾರಿಸಿದರು.
ಅಪಘಾತದಲ್ಲಿನ ಗಾಯಾಳು ಶಿಕ್ಷಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಬಿ.ಬಿರಾದಾರ, ಸಾವಿತ್ರಿಬಾಯಿ ಪುಲೆ ಸಂಘದ ತಾಲೂಕು ಅಧ್ಯಕ್ಷೆ ಮಹಾದೇವಿ ವಾಲಿ, ಶಿಕ್ಷಕ ಎಚ್.ಬಿ.ಪಾಟೀಲ ಆಗ್ರಹಿಸಿದ್ದಾರೆ. ಕಳೆದ ಪಂಚಾಯತ್ ನ ಚುನಾವಣೆಯಲ್ಲಿಯೂ ಇದೇ ರೀತಿಯಾದ ಅಪಘಾತ ಸಂಭವಿಸಿತ್ತು. ಆ ಸಂದರ್ಭದಲ್ಲಿನ ಗಾಯಾಳು ಶಿಕ್ಷಕರಿಗೆ ಇಲ್ಲಿಯವರೆಗೂ ಯಾವುದೇ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರ ದೊರಕಿಸಿಕೊಡುವ ಕಾರ್ಯ ಮೇಲಾಧಿಕಾರಿಗಳಿಂದ ಆಗಬೇಕು ಎಂದರು.

ಸಿಂದಗಿಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಜಾಫರ್ ಉಪನಾಳ, ಮಹ್ಮದರಫೀಕ ಕಲ್ಬುರ್ಗಿ, ಗೌಡಪ್ಪ ಸಿ.ಎಸ್., ಶಶಿಕಾಂತ ಲಮಾಣಿ, ಸಿದ್ದಲಿಂಗೇಶ ದೊಡ್ಡಮನಿ, ಶರಣಬಸಪ್ಪ ಹುನಗುಂದ, ರವೀಂದ್ರ ಮೇರೆಖೋರ, ಮುತ್ತು ಲಮಾಣಿ, ಮಲ್ಲಿಕಾರ್ಜುನ ಪಾಟೀಲ್, ಮಲ್ಲನಗೌಡ ಬಿರಾದಾರ, ಲಚಮಯ್ಯ ದಾಸರ, ಎ.ಟಇ.ಹೆರಕಲ್, ಯಲಗೂರದಪ್ಪ ತೆಲಗಿ ಅವರನ್ನು ವಿವಿಧ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಡಾ.ಸತೀಶ ತಿವಾರಿ, ಡಾ.ಅನಿಲ್‌ಕುಮಾರ ಶೇಗುಣಸಿ ಮಾಹಿತಿ ನೀಡಿದ್ದಾರೆ.