ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನಾಟಕಗಳು ಬದುಕಿನ ಎಲ್ಲ ಮೌಲ್ಯಗಳನ್ನು ಬಿತ್ತುತ್ತವೆ. ಪ್ರತೀ ನಾಟಕಗಳು ಜನತೆಗೆ ಒಂದು ಹೊಸದಾದ ದಿವ್ಯ ಸಂದೇಶವನ್ನು ಕೊಡುತ್ತವೆ ಎಂದು ಕುಂಟೋಜಿ ಸಂಸ್ಥಾನ ಬಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ವೇದಿಕೆಯಲ್ಲಿ ವಿಶ್ವ ದಾಸೋಹದ ದಿನಾಚರಣೆಯ ಅಂಗವಾಗಿ ಹಾನಗಲ್ಲನ ಲಿಂ.ಕುಮಾರೇಶ್ವರ ಮಹಾಸ್ವಾಮಿಗಳು, ಸಿದ್ಧಗಂಗಾಮಠದ ಲಿಂ.ಶಿವಕುಮಾರ ಮಹಾಸ್ವಾಮಿಗಳು, ತಾಲೂಕಿನ ಮಡಿಕೇಶ್ವರ ಗ್ರಾಮದ ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯ ಸ್ಮರಣೋತ್ಸವದ ನೆನಪಿನಲ್ಲಿ ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವದ ವತಿಯಿಂದ ಪ್ರಾರಂಭವಾದ ಮೂರು ದಿನಗಳ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಒಳ್ಳೆಯ ನಾಟಕಗಳನ್ನು ನೋಡಿ ಅದರಲ್ಲಿನ ಬದುಕಿನ ಪಾಠಗಳನ್ನು, ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಹಸನಾಗಿರುತ್ತದೆ ಎನ್ನುತ್ತ, ಮೊದಲನೇ ದಿನದ ನಾಟಕ ನಾಟಕದ ಹೆಸರು ಬಂಗಾರದ ಮನುಷ್ಯ. ಲಿಂ.ಚನ್ನಣ್ಣ ದೇಸಾಯಿ ಅವರ ವ್ಯಕ್ತಿತ್ವ ಬಂಗಾರದ ಮನುಷ್ಯರ ತರವೇ ಆಗಿತ್ತು. ಅವರ ಪುತ್ರ ಪ್ರಭುಗೌಡ ದೇಸಾಯಿ ಅವರು ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡುತ್ತ ಅವರದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಬರುವ ದಿನಗಳಲ್ಲಿ ಒಳ್ಳೆಯ ಭವಿಷ್ಯ ಅವರದ್ದಾಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ ಹಿಂದೆ ನಾಟಕಗಳು ಅಂದರೆ ಜೀವಂತ ಕಲೆಯಾಗಿತ್ತು. ನಾಟಕಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಕಲಾವಿದರು ಮಾಡುತ್ತಿದ್ದರು. ಲಿಂ.ಚನ್ನಣ್ಣ ದೇಸಾಯಿ ಮತ್ತು ನಾಟಕಕ್ಕೆ ನಂಟಿತ್ತು. ಹಲವಾರು ನಾಟಕಗಳ ಮೂಲ ಸಮಾಜವನ್ನು ತಿದ್ದುವ ಕೆಲಸವನ್ನು ಅವರು ಮಾಡಿ ಸಾರ್ಥಕತೆಯ ಬದುಕನ್ನು ಸಾಗಿಸಿದ್ದಾರೆ. ಅವರ ಸ್ಮರಣಾರ್ಥ ನಾಟಕೋತ್ಸವ ನಡೆಸುತ್ತಿರುವದು ಮಾದರಿಯ ಕಾರ್ಯವಾಗಿದೆ ಎಂದರು.
ನಾಟಕೋತ್ಸವದ ಮುಖ್ಯಸ್ಥರಾದ ಜೀವನ.ಪಿ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಉದ್ಘಾಟನಾ ನುಡಿಗಳನ್ನಾಡಿದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನಿಕಟಪೂರ್ವ ಅಧ್ಯಕ್ಷ ಎಂ.ಎಚ್.ಹಾಲಣ್ಣವರ ವಕೀಲರು, ಎಂ.ಎಸ್.ನಾವದಗಿ ವಕೀಲರು, ಜೆಓಸಿಸಿ ಬ್ಯಾಂಕ್ ಅಧ್ಯಕ್ಷ ಅರವಿಂದ ಹೂಗಾರ, ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ಬಿರಾದಾರ, ಸೇರಿದಂತೆ ಹಲವರು ಇದ್ದರು. ಸಾಹಿತಿ ಎಸ್.ಎ.ಬೇವಿನಗಿಡದ ಮತ್ತು ವಿ.ಜಿ.ಕೋರಿ ಕಾರ್ಯಕ್ರಮ ನಿರ್ವಹಿಸಿದರು.