ತಿಕೋಟಾ: ಬರುವ ಮೇ 10 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಬೂತನಲ್ಲಿ ಗರಿಷ್ಠ ಮತದಾನ ಆಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಹಂತದಿಂದ ಗ್ರಾಮ ಪಂಚಾಯತಿ ಹಂತದವರೆಗಿನ ಸ್ವೀಪ್ ಸಮಿತಿಯ ಮತದಾನ ಜಾಗೃತಿ ತಂಡವು ಕಾರ್ಯನಿರ್ವಹಿಸುತ್ತಿದೆ.
ತಾಲ್ಲೂಕಿನಲ್ಲಿ ಬರುವ ಹದಿನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಬೂತಗಳಲ್ಲಿ ಶನಿವಾರ ಚುನಾವಣಾ ಆಯೋಗವು ಪ್ರಜಾಪ್ರಭುತ್ವ ಹಬ್ಬದ ಹೆಸರಿನಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಎಂಬ ನೂತನ ಕಾರ್ಯಕ್ರಮ ನೆರವೇರಿಸಿ ಮತದಾನ ಎಂಬ ಘೋಷ ವಾಕ್ಯ ಒಳಗೊಂಡಿರುವ ಭಾವುಟವನ್ನು ದ್ವಜಾರೋಹಣ ಮಾಡಲಾಯಿತು.
ಘೋಣಸಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ ಸಂಖ್ಯೆ 4, 5 ಹಾಗೂ 6 ರಲ್ಲಿ ಪಿಡಿಓ ಸದಾಶಿವ ಬೊವಿನ್ ದ್ವಜಾರೋಹಣ ನೆರವೇರಿಸಿ ಮಾತನಾಡಿ ಮತದಾನದಲ್ಲಿ ಭಾಗವಹಿಸಿವದು ಎಲ್ಲ ಮತದಾರರ ಸಾಮಾಜಿಕ ಜವಾಬ್ದಾರಿಯಾಗಿದೆ. ಪ್ರತಿ ಮತದಾರ ತಮ್ಮ ಮತದ ಮೌಲ್ಯ ಅರಿತು ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ಪಾಲ್ಗೊಂಡು ಬಲಿಷ್ಟ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಬಾಕ್ಸ ಸುದ್ದಿ*””””
ಜಾಗೃತಿ ಗೀತೆಗೆ ಕೋಲಾಟ ಕುಣಿತ: ಸಾರ್ವಜನಿಕರಿಗೆ ಮತದಾನ ಹೆಚ್ಚಳ ಕುರಿತು ಹಲವು ಅಭಿಯಾನ ಕೈಗೊಂಡು ಜಾಗೃತಿ ಮೂಡಿಸಿದೆ. ಘೋಣಸಗಿ ಗ್ರಾಮ ಪಂಚಾಯತಿ ಮಟ್ಟದ ಸ್ವೀಪ್ ಸಮಿತಿ ತಂಡವು ಚುನಾವಣಾ ಆಯೋಗದ ಪ್ರಮುಖ ಜಾಗೃತಿ ಗೀತೆಗಳಿಗೆ ಮಹಿಳಾ ಬಿಎಲ್ಓ ಶಿಕ್ಷಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ಅಡುಗೆ ಸಿಬ್ಬಂದಿ, ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು, ಹಿರಿಯ ವಿದ್ಯಾರ್ಥಿನಿಯರು ಕೋಲಾಟ ಆಡುತ್ತಾ ಮತದಾನ ಜಾಗೃತಿ ಗೀತೆಗೆ ಹೆಜ್ಜೆ ಹಾಕಿದರು. ಹಬ್ಬಾ ಹಬ್ಬಾ ಮತದಾನ ಹಬ್ಬ ಎಂಬ ಗೀತೆಗೆ ಗ್ರಾಮದ ಬಸ್ ನಿಲ್ದಾಣ, ಮಲ್ಲಿಕಾರ್ಜುನ ದೇವಾಸ್ಥಾನ, ಅಮೋಘಸಿದ್ದ ದೇವಾಲಯದ ಬೀದಿಗಳಲ್ಲಿ ಕೋಲಾಟದ ಮೂಲಕ ಗಮನ ಸೆಳೆದು ಗ್ರಾಮಸ್ಥರಿಗೆ ಮನರಂಜನೆ ನೀಡುತ್ತಾ ಕರ ಪತ್ರಗಳನ್ನು ಹಂಚುತ್ತಾ ವಿಶೇಷ ಅಭಿಯಾನದ ಮೂಲಕ ಪ್ರತಿ ಮತದಾರರು ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ರವಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಡಿ.ಎಚ್.ಬಂಡಿವಡ್ಡರ, ಬಿಎಲ್ಒ ಸವಿತಾ ಹತ್ತಿಕಾಳ, ಕೆ.ಎಲ್.ಸೋನಾರ, ಅಂಜನಾ ದೇಶಮುಖ, ಜೆ.ಎ.ಕಲಘಟಗಿ, ಮಹಿಳಾ ಸ್ವ ಸಹಾಯ ಗುಂಪಿನ ಗಂಗುಬಾಯಿ ಜಮಖಂಡಿ, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಶಹಾಪುರ, ಅಂಜಲಾದೇವಿ ಮಲಕನವರ, ಯಮುನಾಬಾಯಿ ಹುಲಗಬಾಳ, ಭಾರತಿ ಪಾಟೀಲ, ಮಲ್ಲಮ್ಮ ಮಠ, ಸಂತೋಷ ದೇವಕರ, ಕಲಾವತಿ ನರೂಟಿ, ಮಾನಂದಾ ಹಿರೇಮಠ, ಶ್ರೀಶೈಲ ಖವಿ, ಭಾರತಿ ಪಾಟೀಲ, ಕಲಾವತಿ ಬಜಂತ್ರಿ, ಶಂಕರ ಬೂವಿನ್ ಇದ್ದರು.