ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡ್ಬಲ್ಯೂಜೆ)ದ ೩೯ನೇ ರಾಜ್ಯಸಮ್ಮೇಳನ ಜ. ೧೮ ಮತ್ತು ೧೯ ರಂದು ಕಲ್ಪತರುನಾಡು ತುಮಕೂರಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಬಿ. ವಡವಡಗಿ ತಿಳಿಸಿದ್ದಾರೆ.
ಜಂಟಿ ಹೇಳಿಕೆ ನೀಡಿರುವ ಅವರು, ಪತ್ರಿಕೋದ್ಯಮ, ಪತ್ರಕರ್ತರು ಸೇರಿದಂತೆ ನ್ಯೂಸ್ ರೂಂ ನ ಎಲ್ಲ ಆಯಾಮಗಳ ಕುರಿತು ಚಿಂತನ-ಮಂಥನ, ತನ್ಮೂಲಕ ಪತ್ರಿಕೋದ್ಯಮದ ಸಮಗ್ರ ಹಿನ್ನೋಟ, ಮುನ್ನೋಟಗಳನ್ನು ಕಾಣುವುದು ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದವರು ತಿಳಿಸಿದ್ದಾರೆ.
ಕೋವಿಡ್ ಕಷ್ಟದ ಕಾಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ನೆರವಿಗೆ ಧಾವಿಸುವ ಮೂಲಕ ಅಭದ್ರತೆಯ ಆತಂಕದಲ್ಲಿದ್ದ ಪತ್ರಕರ್ತರಿಗೆ ಆಸರೆಯಾಗಿದ್ದು ಸಂಘಟನಾ ಶಕ್ತಿಯ ಸಾರ್ಥಕತೆ ಎನ್ನಬಹುದು.
ಸಮ್ಮೇಳನ ಉದ್ಘಾಟನೆ: ೩೯ನೇ ರಾಜ್ಯ ಸಮ್ಮೇಳನದ ಉದ್ಘಾಟನೆ ಜ.೧೮ ರಂದು ತುಮಕೂರಿನಲ್ಲಿ ನಡೆಯಲಿದೆ.
ಇದಕ್ಕೂ ಮುನ್ನ ಬೆಳಗ್ಗೆ ೮.೩೦ಕ್ಕೆ ತುಮಕೂರಿನ ಟೌನ್ ಹಾಲ್ ಬಿಜಿಎಸ್ ವೃತ್ತದಿಂದ ಪತ್ರಕರ್ತರ ಸಾಂಸ್ಕೃತಿಕ ಮೆರಗಿನ ಮೆರವಣಿಗೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ ಚಾಲನೆ ನೀಡಲಿದ್ದಾರೆ.
ಅಂದೇ ಬೆಳಗ್ಗೆ ೧೧ ಗಂಟೆಗೆ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಕೆ.ಎನ್. ರಾಜಣ್ಣ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಳ್ಳುವರು.
ಸಂವಾದ ಗೋಷ್ಟಿಗಳು:
ಎರಡು ದಿನಗಳ ಸಮ್ಮೇಳನದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಂವಾದ ಮತ್ತು ಗೋಷ್ಠಿಗಳು ನಡೆಯಲಿವೆ.
ಜ. ೧೮ ರಂದು ಮಧ್ಯಾಹ್ನ ೨ ಗಂಟೆಗೆ ಸಂವಿಧಾನ ಮತ್ತು ಮಾಧ್ಯಮ ವಿಷಯವಾಗಿ ನಡೆಯುವ ಗೋಷ್ಟಿಯನ್ನು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ ಪಾಟೀಲ್ ಉದ್ಘಾಟಿಸಲಿದ್ದು, ಖ್ಯಾತ ಪತ್ರಕರ್ತ ಜಿ.ಎನ್ ಮೋಹನ್ ವಿಷಯ ಮಂಡಿಸಲಿದ್ದು, ಮುಖ್ಯಮಂತ್ರಿಗಳು ರಾಜಕೀಯ ಸಲಹೆಗಾರರಾದ ಬಿ.ಆರ್ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ, ಶಾಸಕರೂ ಆದ ಎ. ಎಸ್. ಪೊನ್ನಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ ೪.೩೦ಕ್ಕೆ ಸುದ್ದಿಮನೆ ಮತ್ತು ಪೋಟೋಗ್ರಾಫಿ ಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅವರು ಉದ್ಘಾಟಿಸಲಿದ್ದು, ಹಿರಿಯ ಪತ್ರಿಕಾಛಾಯಾಗ್ರಾಹಕ ಕೆ.ಗೋಪಿನಾಥ್ ಅನುಶಾಂತರಾಜ್ ಶರಣು ಬಸಪ್ಪ ಪಾಲ್ಗೊಳ್ಳಲಿದ್ದಾರೆ.
ಜ. ೧೯ ರಂದು ಬೆಳಗ್ಗೆ ೧೦.೩೦ಕ್ಕೆ ಮಾಧ್ಯಮ ಮತ್ತು ಓದುಗರು /ನೋಡುಗರು/ಕೇಳುಗರು ಗೋಷ್ಟಿಯನ್ನು ವಿಜಯವಾಣಿ ಸಂಪಾದಕ ಕೆ.ಎನ್ ಚನ್ನೆಗೌಡ ಉದ್ಘಾಟಿಸಿದರೆ, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ ಐನಕೈ ಅವರು ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತರಾದ ಅನಂತ ಚಿನಿವಾರ, ಮೈಸೂರುವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಎಂ ಎಸ್ ಸ್ವಪ್ನ, ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೧೨ ಕ್ಕೆ ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು ಗೋಷ್ಟಿಯನ್ನು ಸುವರ್ಣ ನ್ಯೂಸ್ ಸಂಪಾದಕರ ಅಜಿತ್ ಹನುಮಕ್ಕನವರ್ ಉದ್ಘಾಟಿಸಲಿದ್ದು, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ , ಕಸ್ತೂರಿ ಸಂಪಾದಕರಾದ ಶಾಂತಲಾ ಧರ್ಮರಾಜ, ದಾವಣಗೆರೆ ವಿವಿ ಡಾ. ಶಿವಕುಮಾರ ಕಣಸೋಗಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ೨.೩೦ಕ್ಕೆ ಸ್ಥಳೀಯ ಪತ್ರಿಕೆಗಳು /ಜಾಹೀರಾತು/ವಿತರಕರು ಗೋಷ್ಟಿಯನ್ನು ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್ ಉದ್ಘಾಟಿಸಲಿದ್ದು ಹಿರಿಯ ಪತ್ರಿಕಾ ಸಂಪಾದಕರಾದ ಎಸ್ ನಾಗಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡು ದಿನಗಳ ಗೋಷ್ಟಿಗಳಲ್ಲಿ ಸಂವಾದಕರಾಗಿ ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಶಿವಕುಮಾರ್ ಬೆಳ್ಳಿತಟ್ಟೆ, ಉಗಮ ಶ್ರೀನಿವಾಸ್, ಕುಚ್ಚಂಗಿ ಪ್ರಸನ್ನ, ಮರಿಯಪ್ಪ, ಉಮೇಶ್ ಭಟ್ , ಹರೀಶ್ ರೈ, ಗುರುನಾಥ, ಬಿ.ಎಂ ಹನೀಫ್, ಟಿ. ಎಂ. ಸತೀಶ್ ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಗಳ ಸಭೆ ಮತ್ತು ಕಲ್ಪತರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಶಾಖೆಯು ಸಮ್ಮೇಳನದ ಆತಿಥ್ಯ ವಹಿಸಿದ್ದು ಜಿಲ್ಲಾ ಘಟಕದ ಅಧ್ಯಕ್ಷರಾದ ಚಿ. ನಿ. ಪುರುಷೋತ್ತಮ , ಪ್ರಧಾನ ಕಾರ್ಯದರ್ಶಿ ರಘುರಾಮ್ ತಂಡ ಅವಿರತವಾಗಿ ಶ್ರಮಿಸುತ್ತಿದೆ ಎಂದವರು ತಿಳಿಸಿದ್ದಾರೆ.
ಸಮ್ಮೇಳನವು ಸಾಂಸ್ಕೃತಿಕ ಸಮಾರಂಭಗಳನ್ನು ಒಳಗೊಂಡಿದ್ದು ಖ್ಯಾತ ಗಾಯಕಿ ಶಮಿತ ಮಲ್ನಾಡ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

