ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇತ್ತೀಚಿಗೆ ವಿಜಯಪುರ ಜಿಲ್ಲೆಯಲ್ಲಿ ಸುಮಾರು ೧೦-೧೫ ಜನರ ಡಕಾಯಿತರ ಗುಂಪು, ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರತವಾಗಿದ್ದು, ಸದರಿ ಗುಂಪು ಊರ ಹೊರ ವಲಯದಲ್ಲಿರುವ ಒಂಟಿ ಮನೆಗಳಿಗೆ ಹೋಗಿ, ಮನೆಯಲ್ಲಿ ಜನ ಇದ್ದರು, ಇಲ್ಲದೆ ಇದ್ದರು, ಮನೆಯ ಬಾಗಿಲುಗಳಿಗೆ ಕಲ್ಲು ಎತ್ತಿ ಹಾಕಿ, ಒಡೆದು, ಮನೆಯ ಒಳಗೆ ಪ್ರವೇಶಿಸಿ, ಮನೆಯಲ್ಲಿರುವ ಜನರಿಗೆ ಅಪಾಯಕಾರಿ ಆಯುಧ ತೋರಿಸಿ, ಹೆದರಿಸಿ, ಬೆದರಿಸಿ, ಕೂಡಿ ಹಾಕಿ ಅವರ ಹತ್ತಿರವಿರುವ, ಹಾಗೂ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳಾದ ಬೆಳ್ಳಿ, ಬಂಗಾರ, ಹಣ ತರಬೇಕು ಎಂದು ಹೇಳುತ್ತಾರೆ. ಒಂದು ವೇಳೆ ತಂದು ನೀಡದೆ ಹೋದರೆ ಅವರ ಜೀವಕ್ಕೆ ಅಪಾಯ ಮಾಡಲು ಹಿಂಜರಿಕೆ ಮಾಡುವುದಿಲ್ಲ. ಕೊನೆಯಲ್ಲಿ ಮನೆಯಿಂದ ಹೋಗುವ ಸಮಯದಲ್ಲಿ ಮೊಬೈಲಗಳನ್ನು ತೆಗೆದುಕೊಂಡು ಹೋಗಿ ಮೊಬೈಲಗಳನ್ನು ಹಾನಿ ಮಾಡುತ್ತಾರೆ. ಈ ತರಹದ ಘಟನೆಗಳು ಇಗಾಗಲೇ ಹಿಟ್ನಳ್ಳಿ, ಬಸವನ ಬಾಗೇವಾಡಿ ಹಾಗೂ ವಿಜಯಪುರ ನಗರದಲ್ಲಿ ಜರುಗಿರುತ್ತವೆ.
ಸಾರ್ವಜನಿಕರು, ಯುವಕರು ರಾತ್ರಿ ಹೊತ್ತಲ್ಲಿ ಸ್ವಯಂ-ಪ್ರೇರಿತರಾಗಿ ಸುಮಾರು ೧೫-೨೦ಜನ ಸೇರಿ ತಮ್ಮ ಗ್ರಾಮಗಳಲ್ಲಿ ಹಾಗೂ ನಗರಗಳಲ್ಲಿ ಸುತ್ತಾಡುವುದು ಹಾಗೂ ಸಂಶಾಸ್ಪದವಾಗಿ ಕಂಡು ಬರುವ ಅಪರಿಚಿತ ಜನರ ಗುಂಪುಗಳನ್ನು ಗುರುತಿಸಿ, ವಿಚಾರಿಸಿ, ಸಮರ್ಪಕ ಉತ್ತರ ನೀಡದೇ ಇದ್ದಾಗ ತುರ್ತು ವಾಹನ ಸಂಖ್ಯೆ ೧೧೨, ಸಿಂದಗಿ ಪೊಲೀಸ್ ಠಾಣೆ ನಂ:೦೮೪೮೮-೨೨೧೩೩೩, ಪಿಎಸ್‌ಐ-೯೪೮೦೮೦೪೨೫೭, ಸಿಂದಗಿ ಟೌನ್ ಬಿಟ್ ಪೊಲೀಸ್ ನಂ: ೮೨೭೭೯೭೧೦೧೫/೮೨೭೭೯೭೧೦೧೬ ದುರವಾಣಿ ಸಂಖ್ಯೆಗಳಿಗೆ ಕರೆ ಮಾಡಬೇಕು ಎಂದು ಪಿಎಸ್‌ಐ ಆರೀಫ್ ಮುಷಾಪುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸಿಂದಗಿ ತಾಲೂಕಿನ ವಿವಿಧ ಗ್ರಾಮದ ಹಾಗೂ ನಗರದ ಹೊರ ವಲಯಗಳಲ್ಲಿ ಮನೆಯಲ್ಲಿ ವಾಸಿಸುವ ಜನರು ತುಂಬಾ ಹುಷಾರಾಗಿ ಇರಬೇಕು, ಜನರು ತಮ್ಮ ಹತ್ತಿರವಿರುವ ಬೆಲೆ ಬಾಳುವ ಬಂಗಾರ, ಹಣ ಇತರೆ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡಬೇಕು.. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸಿಸಿ ಟಿವಿ ಹಾಗೂ ಅಲರ್ಟ್ ಸಿಸ್ಟಮ್‌ಗಳನ್ನ ಅಳವಡಿಸಿಕೊಳ್ಳಬೇಕು.”
– ಆರೀಫ್ ಮುಷಾಪುರಿ
ಪಿಎಸ್‌ಐ ಸಿಂದಗಿ