ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ಅವಳಿ ಮಕ್ಕಳ ಪೈಕಿ ಒಬ್ಬ ಮಗುವಿನ ಶವ ಮಂಗಳವಾರ ಪತ್ತೆಯಾಗಿದೆ.
ಪತ್ತೆಯಾದ ಮಗು ಹುಸೇನ್ ಭಜಂತ್ರಿ (೧೩ ತಿಂಗಳು).
ಸೋಮವಾರ, ತಾಯಿ ಭಾಗ್ಯಶ್ರೀ ನಿಂಗರಾಜ ಭಜಂತ್ರಿ ತನ್ನ ನಾಲ್ವರು ಮಕ್ಕಳ ಸಮೇತ ನೀರು ಪಾಲಾಗಿದ್ದಾಗ ಭಾಗ್ಯಶ್ರೀಯನ್ನು ಸ್ಥಳೀಯರು ಕಾಪಾಡಿದ್ದರು. ನಾಲ್ವರ ಪೈಕಿ ಇಬ್ಬರು ಮಕ್ಕಳ ಮೃತದೇಹ ಸೋಮವಾರವೇ ಪತ್ತೆಯಾಗಿತ್ತು.
ರಕ್ಷಿಸಿದ ಅರಣ್ಯ ಕಾರ್ಮಿಕ:
ಸೋಮವಾರ, ಕಾಲುವೆಯ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಕೆಬಿಜೆಎನ್ ಎಲ್ ಅರಣ್ಯ ವಿಭಾಗದಲ್ಲಿ ದಿನಗೂಲಿ ನೌಕರ ನಾಗೇಶ ಕೊಳ್ಳಾರ, ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯ ಚೀರಾಟ ಗಮನಿಸಿ, ಕೆಲವರ ಸಹಾಯದಿಂದ ತನ್ನ ಎಲೆಕ್ಟ್ರಿಕ್ ಬೈಕ್ ನ ಚಾರ್ಜರ್ ನ ಕೇಬಲ್ ಎಸೆದು ಮಹಿಳೆಯನ್ನು ಕಾಪಾಡಿದ್ದಾನೆ.
ಈ ಬಗ್ಗೆ ಸ್ವತಃ ನಾಗೇಶ ಕೊಳ್ಳಾರ ಪೊಲೀಸರಿಗೆ ದೂರು ನೀಡಿದ್ದು, ಆತನ ಹೇಳಿಕೆಯ ಆಧಾರದ ಮೇಲೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಮೇರೆಗೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ನಂತರ ಘಟನೆಯ ನಿಜಾಂಶ ಹೊರಬೀಳಲಿದೆ. ಸದ್ಯಕ್ಕೆ ತಾಯಿ ಭಾಗ್ಯಶ್ರೀ ಮೇಲೆಯೇ ಪ್ರಕರಣ ದಾಖಲಾಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಇದ್ದರು.
ನಿನ್ನೆ ಪತ್ತೆಯಾದ ಇಬ್ಬರ ಹಾಗೂ ಇಂದು ಪತ್ತೆಯಾದ ಒಬ್ಬ ಮಗು ಸೇರಿ ಮೂವರ ಮರಣೋತ್ತರ ಪರೀಕ್ಷೆ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜರುಗಿತು. ಸಂಜೆಯವರೆಗೂ ಮೂರು ಮೃತ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿರಲಿಲ್ಲ.
ಪತ್ತೆಗಾಗಿ ಕಾರ್ಯಾಚರಣೆ:
ಇನ್ನೊಬ್ಬ ಮಗುವಿನ ಮೃತ ದೇಹಕ್ಕಾಗಿ ಮಂಗಳವಾರ ಸಂಜೆಯವರೆಗೂ ಅಗ್ನಿಶಾಮಕ ಹಾಗೂ ಮೀನುಗಾರರು ಸೇರಿ ಪತ್ತೆ ಕಾರ್ಯ ಮುಂದುವರೆಸಿದ್ದರು. ಸಂಜೆಯವರೆಗೂ ಶವ ಪತ್ತೆಯಾಗಿರಲಿಲ್ಲ.