ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ‘ಅಹಂಕಾರ ಬಿಟ್ಟಾಗ ಅತ್ಮ ಸಾಕ್ಷಾತ್ಕಾರ ವಾಗಲಿದೆ’ ಎಂದು ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ದೊಡ್ಡಣ್ಣ ಹೇಳಿದರು.
ಜಿಲ್ಲೆಯ ಚಡಚಣ ತಾಲ್ಲೂಕಿನ ಭಾವೈಕ್ಯತೆಯ ತಾಣ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ, ನಂತರ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಮೊಬೈಲ್ ಇದನ್ನ ಯಾವನೋ ಕಂಡು ಹಿಡಿದ್ದಾನೋ ಏನೋ, (ಮೊಬೈಲ್) ಇದು ಬಂದು ಈಗಿನ ಮಕ್ಕಳು ಓದುವುದನ್ನು ಬಿಡಿಸಿದೆ. ಈಗಲೂ ನನ್ನ ಮನೆಯಲ್ಲಿ ಅಪಾರ ಪುಸ್ತಕಗಳು ಇವೆ. ಈಗಲೂ ನಾವಿಬ್ಬರೂ ಪುಸ್ತಕ ಓದುತ್ತೇವೆ. ಆದರೆ ಮುಂದೊಮ್ಮೆ ನಮ್ಮಲ್ಲೇ ಪುಸ್ತಕ ಓದುವ ವ್ಯಕ್ತಿ ಬರಬಹುದು. ದೇವರು ಎಲ್ಲಿಯು ಹೋಗಿಲ್ಲ ಇಲ್ಲಿಯೇ ನಮ್ಮ ನಿಮ್ಮಲ್ಲೇ ಇದ್ದಾನೆ’ ಎಂದವರು ಈಗಲೂ ಕೂಡಾ ನಾನು ನನ್ನ ಪತ್ನಿ ಮನೆ, ಮಠಗಳಲ್ಲಿ ಕಸಗೂಡಿಸುತ್ತೇವೆ ಎಂದು ಹೇಳಿದರು.
ಶ್ರೀಮಠದಲ್ಲಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿರವರು ಕಾರ್ಯ ಕೈಗೊಂಡ ಸಾಮಾಜಿಕ ಕ್ರಾಂತಿಯ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದಿದ್ದು ತುಂಬಾ ಶ್ಲಾಘನೀಯ ಎಂದು ಶ್ರೀಮಠದ ಕುರಿತು ದೊಡ್ಡಣ್ಣ ಪ್ರಶಂಸಿದರು.
ಇದಕ್ಕೂ ಮೊದಲು ಸ್ವಾತಂತ್ರ್ಯ ಸೇನಾನಿ ಮುರುಗೋಡ ಮಹಾದೇವರ ಹಾಗೂ ಭಾವೂಸಾಹೇಬರ, ಗಿರಿಮಲ್ಲೇಶ್ವರ ಮಹಾರಾಜರ ದೇವಸ್ಥಾನಗಳ ಕತೃ ಗದ್ದುಗೆಗಳ ದರ್ಶನ ಪಡೆದರು.
ಶ್ರೀಮಠದ ಪೀಠಾಧಿಪತಿ ರೇವಣಸಿದ್ಧೇಶ್ವರ ಮಹಾರಾಜರಿಗೆ ಸನ್ಮಾನಿಸಿದರು. ಕೆಲ ಕಾಲ ಮಠದ ಕುರಿತು, ಸಂತ-ಮಹಂತರ, ಗುರು ಮಹಾರಾಜರ ಹಾಗೂ ಆಧ್ಯಾತ್ಮ ಚಿಂತನ-ಮಂಥನದ ಮಹತ್ವದ ಕುರಿತು ಮತ್ತು ಆತ್ಮಜ್ಞಾನಿ, ಸ್ವಾತಂತ್ರ್ಯ ಸೇನಾನಿ ಮುರಗೋಡ ಮಹಾದೇವರ ಸ್ವಾತಂತ್ರ್ಯ ಚಳವಳಿಯಲ್ಲಿನ ಪ್ರಮುಖ ಪಾತ್ರದ ಕುರಿತು ಚರ್ಚೆ ನಡೆಸಿದರು. ಈ ವೇಳೆ ರೇವಣಸಿದ್ಧೇಶ್ವರ ಶ್ರೀಗಳು ದೊಡ್ಡಣ್ಣ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಮಾಧವಾನಂದ ಶೇಗುಣಸಿ, ನಟ ನಿರ್ದೇಶಕ ಪತ್ರಕರ್ತ ವಿಶ್ವಪ್ರಕಾಶ ಟಿ ಮಲಗೊಂಡ, ಮಲ್ಲಿಕಾರ್ಜುನ ಕಾಲತಿಪ್ಪಿ, ಪ್ರಕಾಶ ಕಾಲತಿಪ್ಪಿ, ಶಂಕ್ರೆಪ್ಪ ಮಹಾರಾಜರು, ಮುಕುಂದ ಮುರುಗೋಡ ಮಹಾರಾಜರು, ನಿರಂಜನ ಹಿರೇಮಠ, ವಿವೇಕಾನಂದ ಅರಳಿ, ರಮೇಶ ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.