ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೩ನೇ ತ್ರೈಮಾಸಿಕದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಸ್ತೆಗಳಲ್ಲಿ ಅವಶ್ಯವಿರುವ ಕಡೆ ಇಲಾಖೆ ಮಾನದಂಡ ಅನುಸಾರವಾಗಿ ಹಂಪ್ಸ್ ನಿರ್ಮಿಸಿ ಕ್ರಮ ವಹಿಸುವಂತೆ ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜ.೧೦ ಇಂದು ಆಯೋಜಿಸಿದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೩ನೇ ತ್ರೈಮಾಸಿಕದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ, ರಾಜ್ಯ ರಸ್ತೆಗಳಲ್ಲಿ ಅಗತ್ಯವಿರುವ ಕಡೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಶುದ್ಧ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ನಾಗಠಾಣ ಮತಕ್ಷೇತ್ರದ ಕೇಲವು ವಾರ್ಡ್ಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜುಮನಾಳ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಟೆ, ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಪ್ರೋಜೆಕ್ಟ್ ಡೈರೆಕ್ಟರ್ ಬಿ.ಎಸ್.ರಾಠೋಡ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪೂರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

” ಭ್ರೂಣ ಲಿಂಗ ಪತ್ಯೆ, “ಮಗಳನ್ನು ರಕ್ಷಸಿ ಮಗಳನ್ನು ಓದಿಸಿ” ಯೋಜನೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಶಿಕ್ಷಣದ ಕುರಿತು ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಲು ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಿಲ್ಲೆಯ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಮಾಡಬೇಕು. ಅಧಿಕಾರಿಗಳು ಬೇಸಿಗೆ ನೀರಿನ ಸಮಸ್ಯೆ ಎದುರಾಗದಂತೆ ಈಗಲೇ ಜಿಲ್ಲೆಯಲ್ಲಿ ಶೇ.೧೦೦ರಷ್ಟು ನೀರು ತುಂಬಿಸಿಕೊಳ್ಳಬೇಕು.”
– ಟಿ.ಭೂಬಾಲನ್
ಜಿಲ್ಲಾಧಿಕಾರಿ, ವಿಜಯಪುರ

“ವಿಜಯಪುರ ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿ ಬರುವಂತಹ ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಪ್ರತಿಕ್ರಿಯಿಸಿ ಪರಿಹಾರ ಕಂಡುಕೊಳ್ಳಬೇಕು.”
– ರಿಷಿ ಆನಂದ
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿಜಯಪುರ

