ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರು ಮೈ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ, ಸರ್ಕಾರದ ಯಾವುದೇ ಪ್ರತಿನಿಧಿ ಅವರ ಬಳಿ ಹೋಗದೆ ಇರುವುದು ನಿಜಕ್ಕೂ ಅಮಾನವೀಯವಾದದ್ದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.
ಆಶಾ ಕಾರ್ಯಕರ್ತೆಯರು ಮೂಲಭೂತ ಆರೋಗ್ಯ ಸೇವೆಗಳನ್ನು ತಲುಪಿಸಲು, ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಸುರಕ್ಷಿತ ಹೆರಿಗೆ, ಆರೋಗ್ಯವಂತ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸುವುದಲ್ಲದೆ ಕ್ಷಯ, ಮಲೇರಿಯಾ, ಡೆಂಗೀ, ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಿರತ ಶ್ರಮಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರ ಸಂಬಳವನ್ನು ರೂ.15 ಸಾವಿರಕ್ಕೆ ಏರಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ತನ್ನ ಮಾತನ್ನು ತಪ್ಪಿದೆ.
ಹೆಚ್ಚುತ್ತಿರುವ ಜೀವನ ವೆಚ್ಚ, ಬೆಲೆ ಏರಿಕೆಯಿಂದ ಆಶಾ ಕಾರ್ಯಕರ್ತೆಯರ ಜೀವನವೂ ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬಿಟ್ಟು, ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಬೇಕು ಹಾಗೂ ಅವರ ಆಶ್ವಾಸನೆ ನೀಡಿದಂತೆ ಅವರ ವೇತನವನ್ನು ರೂ.15 ಸಾವಿರಕ್ಕೆ ಏರಿಸಬೇಕು ಎಂದು ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿ ಒತ್ತಾಯಿಸಿದ್ದಾರೆ.

