ಸಿಎಂ ಸಿದ್ದರಾಮಯ್ಯರಿಂದ ಏನೇನೋ ಆಟ | ಔತಣಕೂಟಗಳ ಏರ್ಪಾಡು ಮಾಡಿಸುತ್ತಿರುವುದೇ ಸಿಎಂ | ಸಿಎಂ ಸಿದ್ದರಾಮಯ್ಯಗೆ ಕುಕ್ಕಿದ ಹಳ್ಳಿಹಕ್ಕಿ | ಡಿಸಿಎಂ ಡಿಕೆಶಿ ಪರ ಬ್ಯಾಟಿಂಗ್
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ರಾಜ್ಯದಲ್ಲಿನ ಅಹಿಂದ ಸಚಿವರುಗಳ ಡಿನ್ನರ್ ಮೀಟಿಂಗ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗಲೇ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ಡಿನ್ನರ್ ಮೀಟಿಂಗ್ ಕುರಿತಂತೆ ಇದೀಗ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು, ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ಔತಣಕೂಟಗಳನ್ನು ಏರ್ಪಾಡು ಮಾಡಿಸುತ್ತಿರುವುದೇ ಸಿಎಂ ಸಿದ್ದರಾಮಯ್ಯ. 30 ತಿಂಗಳ ನಂತರ ಸಿಎಂ ಸ್ಥಾನದಿಂದ ಇಳಿಯಬೇಕು. ಹೀಗಾಗಿ ಸಿದ್ದರಾಮಯ್ಯ ಏನೇನೋ ಆಟಗಳನ್ನು ಆಡುತ್ತಿದ್ದಾರೆ ಎಂದು ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.
ಯಾರು ಏನೇ ಮಾಡಿದರೂ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ತಪ್ಪಿಸಲು ಆಗಲ್ಲ. 40 ವರ್ಷಗಳಿಂದ ಡಿಕೆ ಶಿವಕುಮಾರ್ ಕಾಂಗ್ರೇಸ್ಸಿನಲ್ಲಿದ್ದಾರೆ. ಡಿಕೆ ಶಿವಕುಮಾರ್ ಎಲ್ಲಿಗೆ ಹೋದರೂ ಕಾರ್ಯಕರ್ತರು ಅವರನ್ನು ಗುರುತಿಸುತ್ತಾರೆ. ಆದರೆ ಸಿದ್ದರಾಮಯ್ಯ ಚೇಲಾಗಳನ್ನು ಜೊತೆಯಲ್ಲಿಟ್ಟುಕೊಂಡು ಆಟವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

40% ಕಮಿಷನ್ ಆರೋಪಕ್ಕೆ ಏನು ದಾಖಲೆ ಕೊಟ್ಟಿದ್ದೀರಿ? :ಎಚ್ಡಿಕೆ
ಬೆಂಗಳೂರು: ರಾಜ್ಯ ಸರ್ಕಾರದ 60% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎನ್ನುವ ಸಿಎಂ ಸಿದ್ಧರಾಮಯ್ಯ ಶೇ. 40 ರಷ್ಟು ಕಮಿಷನ್ ಆರೋಪಕ್ಕೆ ಏನು ದಾಖಲೆ ಕೊಟ್ಟಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, 60% ಕಮೀಶನ್! ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮಾನ್ಯ ಮುಖ್ಯಮಂತ್ರಿಗಳೇ? ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿದ ಆರೋಪ ಎಂದಿದ್ದಾರೆ.
ನಮ್ಮ ಪಕ್ಷದ ಸರಕಾರಕ್ಕಿಂತ ಹಿಂದಿನ ಬಿಜೆಪಿ ಸರ್ಕಾರವೇ ವಾಸಿ ಇತ್ತು ಎಂದು ಅಲವತ್ತುಕೊಂಡಿದ್ದರು ನಿಮ್ಮ ಪಕ್ಷದ ಗುತ್ತಿಗೆದಾರರು! ಕಾಂಗ್ರೆಸ್ ಸರಕಾರದಲ್ಲೂ 40% ಕಮೀಶನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರವಾದ ಆರೋಪವಾಗಿದೆ.

