ಬಂದಾಳದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಖಡಕ್ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಪ್ರದೇಶದ ಶ್ರೇಯೋಭಿವೃದ್ಧಿಗೆ ಸರಕಾರ ಹಲವಾರು ಯೋಜನೆಗಳಿಗಾಗಿ ಅನುದಾನ ಮಂಜೂರು ಮಾಡುತ್ತಿದೆ. ಸದುಪಯೋಗವಾಗಬೇಕೆನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಕ್ರೀಯಾಯೋಜನೆ ಮಾಡಿ ಸರಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಸೂಚಿಸಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ಹಮ್ಮಿಕೊಂಡ ಜನಸಂಪರ್ಕ ಸಭೆಯನ್ನು ಶಾಸಕ ಅಶೋಕ ಮನಗೂಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳ ಮೂಲಭೂತ ಸೌಕರ್ಯಗಳಾದ ಶೌಚಾಲಯ, ನೀರು, ಶಾಲಾ ಕಂಪೌಂಡ ಸೇರಿದಂತೆ ಅನೇಕ ಸೌಲಭ್ಯ ಪೂರೈಸಲು ಇಲಾಖಾವಾರು ಸಭೆ ನಡೆಸಿ ಬಂದಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಿಂದಗಿ, ಓತಿಹಾಳ, ಬೂದಿಹಾಳ, ಬಂದಾಳ ಜನರ ಮೂಲಭೂತ ಸಮಸ್ಯೆಗಳನ್ನು ನರೇಗಾ ಯೋಜನೆಯಲ್ಲಿ ನಿರ್ವಹಿಸಬಹುದು. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರ ಕನಸಿನ ಮೇರೆಗೆ ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿ ಕೋಡಬೇಕು ಎನ್ನುವ ಉದ್ದೇಶದಿಂದ ಗ್ರಾಪಂವಾರು ಜನಸಂಪರ್ಕ ಸಭೆ ಕೈಗೊಳ್ಳಲಾಗುತ್ತಿದೆ. ಸರಕಾರದ ಯೋಜನೆಗಳ ಮಾಹಿತಿ ನೀಡುವ ಶಾಸಕ ನಾನಲ್ಲ. ನಾನು ನಿಮ್ಮೆಲ್ಲರ ಸೇವಕ. ಸರಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಚಿಮ್ಮಲಗಿ ಏತನೀರಾವರಿ ಯೋಜನೆಯ ಕಾಲುವೆ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿದ್ದು ಅದನ್ನು ಪೂರ್ಣಗೊಳಿಸಲು ಕ್ರಮ ಜರುಗಿಸುವಂತೆ ಪರಸುರಾಮ ದೇವಣಗಾಂವ ವಿನಂತಿಸಿದರು. ಒಟ್ಟು ೩೬ಕಿಮೀ ಕಾಲುವೆಯಲ್ಲಿ ೧೯ಕಿಮೀ ಕಾಮಗಾರಿ ಮುಗಿದಿದ್ದು, ೧೭ಕಿಮೀ ಚಿಕ್ಕಸಿಂದಗಿ, ಬಂದಾಳ ಗ್ರಾಮದ ಕೆಲವರ ತಕರಾರು ಮಾಡಿದ್ದು ಅದಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲಾಖೆಯಿಂದಲ್ಲ ಎಂದು ಶಾಸಕರು ವಿವರಿಸಿದರು.
೨೦೧೬ರಲ್ಲಿ ಮಂಜುರಾದ ನಮ್ಮ ಮನೆ ಯೋಜನೆಯ ಬಿಲ್ಲು ನೀಡುವಲ್ಲಿ ಗ್ರಾಪಂ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮಹಾದೇವ ಜೋಗುರ ಆರೋಪಿಸಿದರು.
ಜಟ್ಟಿಂಗರಾಯ ಬನ್ನಿಕಟ್ಟಿ ಮಾತನಾಡಿ, ಗ್ರಾಮಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿದ್ದು ಸ್ವಚ್ಚಗೊಳಿಸಲು ಕ್ರಮ ಜರುಗಿಸುವಂತೆ ಮನವಿ ಮಾಡಿದರೆ, ಮಲ್ಲಿಕಾರ್ಜುನ ಹಿರೇಕುರಬರ ಶಾಲೆಯ ಹೆಣ್ಣು ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಶಿವಾನಂದ ಸಾಲಿಮಠ ಮಾತನಾಡಿ, ಓತಿಹಾಳ ಗ್ರಾಮದಲ್ಲಿ ದನದ ಆಸ್ಪತ್ರೆಯಿದ್ದು ಅದಕ್ಕೆ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳಾದ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದರು. ಪ್ರತಿ ಗ್ರಾಪಂಯಲ್ಲಿ ೫ಸಾವಿರ ಜಾನುವಾರಗಳು ಇರುವ ಬಗ್ಗೆ ಸಮೀಕ್ಷೆ ಮಾಡಿ ಕ್ರಮ ಜರುಗಿಸುವಂತೆ ಶಾಸಕರು ಸೂಚಿಸಿದರು.
ಈ ವೇಳೆ ಕೃಷಿ ಇಲಾಖೆ ಜಿಲ್ಲಾ ನಿರ್ದೇಶಕ ಚಂದ್ರಕಾಂತ ಪವಾರ ಮಾತನಾಡಿ, ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪ್ರವೃತ್ತಿಯನ್ನು ತಪ್ಪಿಸುವ ದಿಸೆಯಲ್ಲಿ ರೈತರಿಗೆ ಹಾಗೂ ಮಹಿಳೆಯರು ಸಣ್ಣ ಪುಟ್ಟು ಘಟಕ ಸ್ಥಾಪನೆಗಾಗಿ ಪಿಎಂಎಫ್‌ಎಂಇ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಶೇ.೫೦ರಷ್ಟು ಸಹಾಯಧನ ನೀಡುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ೨೫೦ ಜನರು ಇದರ ಸದುಪಯೋಗ ಪಡೆದುಕೊಂಡು ೧೨೫೦ ಜನರಿಗೆ ಕೆಲಸ ನೀಡಿದ್ದಾರೆ. ಕಾರಣ ಅವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು ಎಂದು ಮಾಹಿತಿ ಒದಗಿಸಿದರು.
ವೇದಿಕೆಯ ಮೇಲೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಗ್ರಾಪಂ ಅದ್ಯಕ್ಷ ಯಮನಪ್ಪ ಹೊಸಮನಿ, ಉಪಾಧ್ಯಕ್ಷೆ ಸರುಬಾಯಿ ನಾಗಾವಿ, ಕೆಡಿಪಿ ಸದಸ್ಯರಾದ ಶಿವಣ್ಣ ಕೊಟಾರಗಸ್ತಿ, ನೂರಹಮ್ಮದ ಅತ್ತಾರ, ಗ್ಯಾರಂಟಿ ಯೋಜನೆಯ ತಾಲೂಕಾದ್ಯಕ್ಷ ಶ್ರೀಶೈಲ ಕವಲಗಿ, ಅಕ್ಷರ ದಾಸೋಹಾಧಿಕಾರಿ ಅರವಿಂದ ಡೋಣೂರ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಜಿಪಂ ಎಇಇ ಜಿ.ವೈ.ಮುರಾಳ, ಆರ್.ಡ್ಯೂಎಸ್ ಎಇಇ ತಾರಾನಾಥ ರಾಠೋಡ, ಅರಣ್ಯಾಧಿಕಾರಿ ಇರ್ಶಾದ ನೇವಾರ ಹಾಗೂ ಬಿರಾದಾರ, ಗ್ರಾಪಂ ಪಿಡಿಒ ರಾಘವೇಂದ್ರ ಚಕ್ರವರ್ತಿ, ಕಾರ್ಯದರ್ಶಿ ಆರ್.ಎನ.ಮುಜಾವರ, ವ್ಹಿ.ಬಿ.ಕುರಡೆ, ಸುರೇಶ ಪೂಜಾರಿ, ಚಂದ್ರಶೇಖರ ದೇವರೆಡ್ಡಿ, ಶಿವಾನಂದ ಬಡಾನೂರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು. ತಾಪಂ ಇಒ ರಾಮು ಅಗ್ನಿ ಪ್ರಾಸ್ತಾವಿಕ ಮಾತನಾಡಿದರು.
ಎನ್.ಕೆ.ಚೌಧರಿ ಸ್ವಾಗತಿಸಿದರು. ಚಂದ್ರಕಾಂತ ಬೂಯ್ಯಾರ ನಿರೂಪಿಸಿದರು. ಶಿಕ್ಷಕ ಬಸವರಾಜ ಅಗಸರ ವಂದಿಸಿದರು.

