ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಗುರು ಬಸವಣ್ಣನವರ ಪ್ರೇರಣೆಯಿಂದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ತತ್ವ ಅನುಸರಿಸುವುದಾಗಿ ಹೇಳುತ್ತಿರುವುದು ತಮ್ಮ ದುರಾಡಳಿತ ಕೃತ್ಯಗಳನ್ನು ಮುಚ್ಚಿಕೊಳ್ಳಲೆಂದು. ಆದರೆ ಅವರ ನಿಜವಾದ ತತ್ವ “ಬಿಜೆಪಿ-ಆರೆಸ್ಸೆಸ್ ಸಾಥ್, ಬಿಜೆಪಿ-ಆರೆಸ್ಸೆಸ್ ವಿಕಾಸ್” ಮಾತ್ರ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆರೋಪಿಸಿದರು.
ಭಾನುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಈಗ ಶತಕ ಬಾರಿಸಿದರೂ ಅವರು ಅದರಲ್ಲಿ ಈವರೆಗೆ ತಾವು ತಮ್ಮ ಯಾವ ಘೋಷಣೆಯನ್ನೂ ಈಡೇರಿಸಿದ್ದು ಹೇಳಿಲ್ಲ. ಅದಾನಿಯ ಅಭಿವೃದ್ಧಿಯೇ ಅವರ ನಿಜ ‘ಮನ್ ಕಿ ಬಾತ್’ ಆಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಜನ ನಿರಾಶ್ರಿತರಾಗಿ ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಾಗ ಹಾಗೂ ಕೋವಿಡ್ ಸಮಯದಲ್ಲಿ ಚಾಮರಾಜನಗರದ ಆಸ್ಪತ್ರೆಯಲ್ಲಿ 20 ಜನರ ಸಾವು ಘಟಿಸಿದಾಗ ಸೇರಿದಂತೆ ಇಂತಹ ಸಂದರ್ಭಗಳಲ್ಲಿ ಯಾವತ್ತೂ ಬಾರದ ಪ್ರಧಾನಿ ಮೋದಿಯವರು ಈಗ ಸರಕಾರಿ ವೆಚ್ಚದಲ್ಲಿ ಒಂದು ವಾರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದಾರೆ. ಇದು ಅವರ ಅಧಿಕಾರ ಮತ್ತು ಹಣದ ಹಪಾಹಪಿಯನ್ನು ತೋರಿಸುತ್ತದೆ ಎಂದು ಗುಡುಗಿದರು.
ಡಾ. ಬಿ.ಆರ್.ಅಂಬೇಡ್ಕರ ಅವರ 125ನೆ ಜಯಂತಿಯಂದೇ ಅವರ ಮೊಮ್ಮಗಳ ಗಂಡ ಸೇರಿದಂತೆ 7ಜನರನ್ನು ನಗರ ನಕ್ಸಲ್ ಹಣೆಪಟ್ಟಿ ಹಚ್ಚಿ ಜೈಲಿಗೆ ಕಳಿಸಿದ್ದಾರೆ. ಅಂಬೇಡ್ಕರ ಅವರ ಮೇಲಿನ ಬಿಜೆಪಿ ಪ್ರೀತಿ ಸುಳ್ಳಿನ ಮೂಟೆಯಾಗಿದೆ ಎಂದು ಕುಟುಕಿದರು.
ಅಂಬೇಡ್ಕರ ಅವರು ರಿಪಬ್ಲಿಕ್ ಪಕ್ಷದವರಾಗಿದ್ದರೂ ಸಹ ಕಾಂಗ್ರೆಸ್ ಪಕ್ಷವು ಅವರನ್ನು ಬರಮಾಡಿಕೊಂಡು ಕಾನೂನು ಮತ್ತು ಸಂಸದೀಯ ಸಚಿವರನ್ನಾಗಿ ಮಾಡಿ ಗೌರವ ಸಲ್ಲಿಸಿದೆ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ರಾಕ್ಷಸ ಎಂದು ಸಂಭೋದನೆ ಮಾಡಿದೆ ಎಂದು ಸುಳ್ಳು ಹೇಳುತ್ತಿರುವ ಬಿಜೆಪಿಯವರಿಗೆ ಅಂಬೇಡ್ಕರ ಮೇಲೆ ಲವಲೇಶವೂ ಗೌರವವಿಲ್ಲ ಎಂದು ದೂರಿದರು.
ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಜಿಲ್ಲೆಗೆ ಬಂದಾಗ “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ” ಎಂದು ಹೇಳಿದ್ದಾರೆ. ಕಾನೂನು ಪ್ರಕಾರ ಚುನಾವಣೆ ಆಯೋಗವು ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕಿತ್ತು. ಆದರೆ ಚುನಾವಣೆ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.
ಇನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಸೋನಿಯಾಗಾಂಧಿ ಅವರನ್ನು ತೆಗಳಿದ್ದು ಖಂಡನೀಯವಾಗಿದೆ. ಅವರು ಮಹಾ ಮಾನವತಾವಾದಿ ಬಸವಣ್ಣನವರ ಹೆಸರು ಹೊಂದಿದ್ದರೂ ಅವರ ತದ್ವಿರುದ್ದ ವ್ಯಕ್ತಿತ್ವ ಹೊಂದಿದ್ದಾರೆ. ಬಾಯಿ ತೆಗೆದರೆ ವಿಷಕಾರುವ ಅವರದು ನಿರಂತರ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾತೆತ್ತಿದರೆ ತಾವು ಹಿಂದು ಹುಲಿ, ಹಿಂದು ಫೈರ್‌ಬ್ರಾö್ಯಂಡ್ ಎಂದು ಹೇಳಿಕೊಳ್ಳುವ ಶಾಸಕ ಯತ್ನಾಳರು ತಮ್ಮ ಪರ ಪ್ರಚಾರಕ್ಕೆ ಬೇರೆ ನಾಯಕರನ್ನು ಕರೆಸುತ್ತಿರುವುದನ್ನು ನೋಡಿದರೆ ಅವರಿಗೆ ಗೆಲ್ಲಲು ಸ್ವಂತ ಬಲವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಎಸ್.ಎಂ.ಪಾಟೀಲ ಗಣಿಹಾರ ಕುಟುಕಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಮುಖಂಡ ನಾಗರಾಜ ಲಂಬು ಇದ್ದರು.
Subscribe to Updates
Get the latest creative news from FooBar about art, design and business.
ಬಿಜೆಪಿಯವರಿಗೆ ಅಂಬೇಡ್ಕರ್ ಬಗ್ಗೆ ಲವಲೇಶವೂ ಗೌರವವಿಲ್ಲ :ಎಸ್.ಎಂ.ಪಾಟೀಲ
Related Posts
Add A Comment