ಬಿಜೆಪಿಯಿಂದ ರಾಜಕೀಯ ದುರ್ಲಾಭ | ಎಂಎಲ್ಸಿ ಸುನೀಲಗೌಡ ಪಾಟೀಲ ಆರೋಪ
ವಿಜಯಪುರ: ವಿರೋಧಿಗಳು ಬಬಲೇಶ್ವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ತೆರಳಿ ಬಲವಂತವಾಗಿ ತಮ್ಮ ಪಕ್ಷದ ಶಾಲ್ ಹಾಕಿ ಫೋಟೋ ಕ್ಲಿಕ್ಕಿಸಿ ರಾಜಕೀಯ ದುರ್ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ, ಅವರ ಈ ಪ್ರಯತ್ನ ಫಲ ನೀಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಮತಯಾಚಿಸಿದ ಅವರು ವಿರೋಧಿಗಳ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯವರು ಮತಕ್ಷೇತ್ರದ ಎಲ್ಲ ಕಡೆ ಕಾಂಗ್ರೆಸ್ ಕಾರ್ಯಕರ್ತ ಮನೆಗಳಿಗೆ ತೆರಳಿ ಅವರು ಬೇಡವೆಂದರೂ ಒತ್ತಾಯ ಪೂರ್ವಕವಾಗಿ ತಮ್ಮ ಪಕ್ಷದ ಶಾಲ್ ಹಾಕಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಎಷ್ಟು ಮತಗಳು ಬರುತ್ತವೆ ಗೊತ್ತಿಲ್ಲ. ಆದರೆ, ಆ ಕುಟುಂಬಗಳ ಮನಸ್ಸು ನೋಯಿಸುತ್ತಿದ್ದಾರೆ. ಹಲವಾರು ಜನ ಕಾಂಗ್ರೆಸ್ ಕಾರ್ಯಕರ್ತರು ತಮಗಾದ ಇಂಥ ಕೆಟ್ಟ ಅನುಭವಗಳ ಕುರಿತು ವಿಡಿಯೋ ಮೂಲಕ ಸ್ಪಷ್ಠಿಕರಣ ನೀಡುತ್ತಿದ್ದಾರೆ. ಈ ಮೂಲಕ ವಿರೋಧಿಗಳ ಬಂಡವಾಳ ಬಯಲು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ವಿರೋಧಿಗಳು ಎಷ್ಟೇ ಪ್ರಯತ್ನ ಪಟ್ಟರೂ ಅವರ ಯತ್ನ ಫಲಿಸುವುದಿಲ್ಲ. ಎಂ. ಬಿ. ಪಾಟೀಲರು ಮತದಾರರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ಇದನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ನೀರಾವರಿ ಯೋಜನೆಗಳ ಮೂಲಕ ಜನರ ಬದುಕು ಕಟ್ಟಿಕೊಡಲು ಮಾಡಿರುವ ಕೆಲಸಗಳು ಜನರ ಕುಟುಂಬಗಳು ತಲೆತಲಾಂತರಗಳವರೆಗೆ ನೆಮ್ಮದಿಯಿಂದ ಜೀವನ ಸಾಗಿಸುವಂತೆ ಮಾಡಿವೆ ಎಂದು ಅವರು ಹೇಳಿದರು.
ಹಿರಿಯರು ಮತ್ತು ಯುವಕರು ಎಂ. ಬಿ. ಪಾಟೀಲರು ಮಾಡಿರುವ ಅಭಿವೃದ್ಧಿ ಕಾರ್ಯಕಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿ ಕೊಡಬೇಕು. ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಆರಿಸಿ ಬರಲು ಕೈಜೋಡಿಸಬೇಕು ಎಂದು ಸುನೀಲಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಈರನಗೌಡ ರುದ್ರಗೌಡ್ರ, ಅಶೋಕ ಶಿರಡೋಣ, ಅಮೋಘಿ ಗೌಡನವರ, ಮುಖಂಡರಾದ ಗುರು ಮಾಳಿ, ಮಸಳಿ ಕುಟುಂಬ ಸದಸ್ಯರು, ಬಾಪುರಾಯ ಬಾಗಲಕೋಟ, ಶಂಕರಗೌಡ ಬಿರಾದಾರ, ಬಸವರಾಜ ನಿಡೋಣಿ, ಬಸವರಾಜ ಅತಾಲಟ್ಟಿ, ಸಿದ್ದಪ್ಪ ಗದ್ಯಾಳ, ಅಡಿವೆಪ್ಪ ಅಟ್ಟಪಳಕರ, ಮಾಳು ಅಟ್ಟಪಳಕರ, ಯಲ್ಲಪ್ಪ ಅಟ್ಟಪಳಕರ ಮುಂತಾದವರು ಉಪಸ್ಥಿತರಿದ್ದರು.