ರೈತ ಸಂಘದ ಮಟ್ಟಿಹಾಳ ಗ್ರಾಮ ಘಟಕ ಉದ್ಘಾಟನೆ
ಕೋಲಾರ: ಮಾನವ ಕುಲಕ್ಕೆ ಅನ್ನ ನೀಡುವ ಅನ್ನದಾತನು ದಿನನಿತ್ಯ ಅನೇಕ ಸಂಕಷ್ಟಗಳೊಡನೆ ಹೆಚ್ಚಿನ ದರಕ್ಕೆ ಬೀಜ, ಗೊಬ್ಬರ, ಕೀಟನಾಶಕಗಳನ್ನು ತಂದು ಬೆಳೆ ಬೆಳೆದರೆ, ಸರಿಯಾದ ಬೆಲೆ ಸಿಗದೇ ನಷ್ಟಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದಾಹರಣೆಗಳನ್ನು ನೊಡುತ್ತಿದ್ದೇವೆ, ಆದ್ದರಿಂದ ರೈತರೆಲ್ಲರೂ ಜಾತಿ, ಮತ, ಪಕ್ಷಗಳನ್ನು ಮರೆತು ಒಂದಾಗಬೇಕು ಎಂದು ನಾಗರದಿನ್ನಿಯ ತಪೋನಿಷ್ಠ ಪ.ಪೂ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ರೈತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದಲ್ಲಿ ರೈತ ಮುಖಂಡರೊಡನೆ ದೀಪ ಬೆಳಗಿಸಿ ಶ್ರೀಗಳು ಮಾತನಾಡಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಕೋಲ್ಹಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ಮಾತನಾಡುತ್ತಾ, ಚುನಾವಣಾ ಸಂದರ್ಭದಲ್ಲಿ ಎಲ್ಲಾ ರಾಜಕೀಯ ನಾಯಕರು ಹಸಿರು ಶಾಲು ಹಿಡಿದು ನಾನು ರೈತನ ಮಗ ಎಂದು ಮತ ಕೇಳಲು ನಮ್ಮೆಲ್ಲರ ಮನೆ ಬಾಗಿಲಿಗೆ ಬರುವರು, ಮುಂದೆ ೫ ವರ್ಷ ರೈತರ ಕಷ್ಟ ಕೇಳುವವರು ದಿಕ್ಕು ಇರುವುದಿಲ್ಲ, ರೈತ ಪ್ರತಿ ದಿನ, ಪ್ರತಿ ಘಳಿಗೆ, ಪ್ರತಿ ಸನ್ನಿವೇಶದಲ್ಲಿ ಕಷ್ಟಗಳನ್ನು ಎದುರಿಸಿ ಬದುಕುವಂತಾಗಿದೆ, ಆದ್ದರಿಂದ ಎಲ್ಲರೂ ಪ್ರಶ್ನಿಸುವ ಗುಣ ಬೆಳಿಸಿಕೊಳ್ಳಬೇಕು, ಪ್ರತಿಶತ ೭೦%ಕ್ಕಿಂತ ಹೆಚ್ಚಿರುವ ರೈತರು ಒಗ್ಗಟ್ಟಾಗಿ ರೈತ ಸಂಘಟನೆ ಬಲ ಪಡಿಸಿಬೇಕು, ಅಂದಾಗ ಎಲ್ಲ ರೈತರಿಗೂ ಸರ್ಕಾರದಿಂದ ಸಿಗುವಂತ ಸಹಾಯ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಬಹುದು ಎಂದರು.
ಚಿಕ್ಕ ಆಸಂಗಿ ಅಧ್ಯಕ್ಷ ಶಶಿಕಾಂತ ಬಿರಾದಾರ ಮಾತನಾಡುತ್ತಾ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಹಲವಾರು ರೈತ ಹೋರಾಟಗಳನ್ನು ಮಾಡುತ್ತಾ ಬಂದಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಘಟನೆ ಗಟ್ಟಿಗೊಳ್ಳಬೇಕಾದರೆ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಗ್ರಾಮ ಘಟಕಗಳಾಗಬೇಕು ಆಗ ಕಬ್ಬಿನ ಬಾಕಿ, ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಬಹುದು ಎಂದರು.
ಈ ವೇಳೆ ರೋಣಿಹಾಳದ ಅಧ್ಯಕ್ಷರಾದ ಬಸಪ್ಪ ನ್ಯಾಮಗೊಂಡ, ತಾ.ಉಪಾಧ್ಯಕ್ಷರಾದ ಕಲ್ಲಪ್ಪ ಗಿಡ್ಡಪ್ಪಗೋಳ, ಶ್ರೀಶೈಲ ಬೆಣ್ಣೂರ, ರಾವುತ್ ಸೊನ್ನದ, ಮಟ್ಟಿಹಾಳ ಅಧ್ಯಕ್ಷರಾದ ಸತ್ಯಪ್ಪ ಕುಳ್ಳೊಳ್ಳಿ, ಕಾಶಿಮಸಾಬ ಬಾಗಾನಗರ, ಈರಪ್ಪ ಬಿರಾದಾರ, ಮುತ್ತಪ್ಪ ಚಲವಾದಿ, ಯಮನಪ್ಪ ಮಾದರ, ಪರಶುರಾಮ ಮಮದಾಪುರ, ನಿಂಗಪ್ಪ ಪೂಜಾರಿ, ಬಸವರಾಜ ಬಿರಾದಾರ,ಸಂಗಪ್ಪ ಗೊಳಗೊಂಡ, ಹಣಮಂತ ತೇಲಿ, ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.