ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳು
ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದಲೇ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 38727 ಮತದಾರರು, 20273 ವಿಶೇಷಚೇತನ ಮತದಾರರಿಗೆ ಏಪ್ರಿಲ್ 29ರಿಂದ ಮೇ.01ರವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ.
ಈಗಾಗಲೇ 80ಡಿ ರಡಿ ಅರ್ಜಿ ನೀಡಿರುವ ಜಿಲ್ಲೆಯ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 30-ಬಿಜಾಪೂರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಹಿರಿಯ ನಾಗರಿಕರ ಮನೆಗೆ ಶನಿವಾರ ಭೇಟಿ ನೀಡಿ, 80 ವರ್ಷ ಮೇಲ್ಪಟ್ಟ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವವರು ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಅನುಮಾನ ಬಂದಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿ, ಮೈಕ್ರೋ ಆಬ್ಜರ್ವರ್, ಮತಗಟ್ಟೆ ಅಧಿಕಾರಿ, ಪೋಲಿಸ್ ಸಿಬ್ಬಂದಿ, ವಿಡಿಯೋಗ್ರಾಫರ್, ಬಿಎಲ್‌ಎಗಳು ಉಪಸ್ಥಿತಿಯಲ್ಲಿ ಮತದಾನ ಪ್ರಕ್ರಿಯೆ ಜರುಗಲಿದೆ.
ಸಾಮಾನ್ಯ ವೀಕ್ಷಕರ ಭೇಟಿ : 30-ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಉದಿತ್ ಪ್ರಕಾಶ ರಾಯ್ ಅವರು 80 ವರ್ಷ ಮೇಲ್ಪಟ್ಟ ಮತದಾರರ ಮನೆಗೆ ಶನಿವಾರ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿ, ಸಿಬ್ಬಂದಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಬಿಜಾಪುರ ನಗರ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಉಪಸ್ಥಿತರಿದ್ದರು.