ತಿಕೋಟಾ: ಬರುವ ವಿಧಾನಸಭೆ ಸಾರ್ವಜನಿಕ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಎತ್ತಿನ ಬಂಡಿಗಳ ಜಾಥಾ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು
ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಮಟ್ಟದ ಸ್ವೀಪ್ ಸಮಿತಿ ವತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಈ ಜಾಗೃತಿ ಕಾರ್ಯಕ್ರಮ ನಡೆಯಿತು.
ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಪಿಡಿಓ ಜೆ.ಎ.ದಶವಂತ ಸಾರ್ವಜನಿಕರು ಈ ಭಾರಿ ನಡೆಯುವ ಚುಣಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮತದಾನವು ನಮ್ಮ ಭವ್ಯ ಭಾರತದ ನಿರ್ಮಾಣಕ್ಕಾಗಿ, ಬಲಿಷ್ಟ ಭಾರತವನ್ನು ಕಟ್ಟುವದಕ್ಕಾಗಿ ಹಾಗೂ ಉತ್ತಮ ಸಮಾಜಕ್ಕಾಗಿ ಪ್ರತಿಯೊಬ್ಬ ಪ್ರಜೆ ಮತದಾನ ಮಾಡುವುದು ಅವಶ್ಯವಾಗಿದೆ. ಯಾರೊಬ್ಬರೂ ಮತದಾನದಿಂದ ವಂಚಿತರಾಗಬೇಡಿ ಎಂದರು.
ಮತದಾನ ಜಾಗೃತಿ ಮೂಡಿಸಲು ಭಾಗವಹಿಸಿದ್ದ ಎತ್ತಿನ ಬಂಡಿಗಳಿಗೆ ತೆಂಗಿನ ಗರಿ, ಬಣ್ಣದ ಬಲೂನ್‍ಗಳ ಮೂಲಕ ಸಿಂಗಾರಗೊಳಿಸಲಾಗಿತ್ತು. ಮತದಾನ ಅರಿವು ಮೂಡಿಸುವ ಮಾಹಿತಿ ಫಲಕಗಳನ್ನು ಹಾಕಲಾಗಿತ್ತು. ಎತ್ತಿನ ಬಂಡಿಯಲ್ಲಿ ಮಾದರಿ ವಿವಿಪ್ಯಾಟ್ ಮಶೀನ್ ಹಾಗೂ ಬ್ಯಾಲೇಟ್ ಯುನಿಟ್ ತಯಾರಿಸಿ ಗ್ರಾಮದಲ್ಲಿ ಕಡ್ಡಾಯ ಮತದಾನದ ಕುರಿತು ಶ್ರೀ ಸಿದ್ದೇಶ್ವರ ಮಾರ್ಗವಾಗಿ ಸಾಗಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಗನಾವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸರಕಾರಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಸ್ವೀಪ್ ಸಮಿತಿಯ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.