ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ನಾಯಕ ರಾಹುಲ ಗಾಂಧಿ ಅವರಿಗೆ ‘ಹುಚ್ಚ’ ಎಂದು ಶ್ರೀಮತಿ ಸೋನಿಯಾಗಾಂಧಿ ಅವರಿಗೆ ವಿಷಕನ್ಯೆ, ಪಾಕಿಸ್ತಾನ ಎಜೆಂಟ್ ಎಂಬ ಪದ ಬಳಕೆ ಮಾಡಿದ್ದು ಅವರ ಕೆಟ್ಟ ನಡವಳಿಕೆಯನ್ನು ಬಿಂಬಿಸುತ್ತದೆ. ಅವರ ಹೇಳಿಕೆ ತೀವ್ರ ಖಂಡನೀಯವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಳೆದ ೫ ವರ್ಷಗಳಿಂದ ನಿರಂತರವಾಗಿ ದ್ವೇಷ ಬಿತ್ತುವ, ಅವಮಾನಕರ, ಅಶ್ಲೀಲ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿತ್ಯ ಬೆಳಗ್ಗೆ, ಮದ್ಯಾಹ್ನ, ಸಾಯಂಕಾಲ, ರಾತ್ರಿ ಹೀಗೆ ದಿನಕ್ಕೆ ೪ ಬಾರಿ ವಿಷ ಕಾರುವ ಕೆಲಸ ಮಾಡುತ್ತಿದ್ದಾರೆ. ಇವರ ಕಳೆದ ೫ವರ್ಷದ ಹೇಳಿಕೆಗಳನ್ನು ಕ್ರೋಡೀಕರಿಸಿದರೆ ದೊಡ್ಡ ಗ್ರಂಥವೇ ಆಗುತ್ತದೆ. ಸದಾ ವಿಷ ಕಾರುವ ಇವರನ್ನು ರಾಜ್ಯದ ಜನತೆ ಏನನ್ನುತ್ತಿದ್ದಾರೆ ಎಂಬುದನ್ನು ಯತ್ನಾಳರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.
ಸೋನಿಯಾ ಗಾಂಧಿಯವರು ಈ ದೇಶದ ಸೊಸೆ. ಕಳೆದ ೫೦ ವರ್ಷಗಳಿಂದ ಈ ದೇಶದಲ್ಲಿ ಅಧಿಕಾರಕ್ಕೆ ಅಸೆ ಪಡದೇ ನಿಸ್ವಾರ್ಥದಿಂದ, ಪ್ರೀತಿ-ವಿಶ್ವಾಸದಿಂದ ಬದುಕಿದ್ದಾರೆ. ೨ಬಾರಿ ಈ ದೇಶದ ಪ್ರಧಾನಮಂತ್ರಿಯಾಗುವ ಅವಕಾಶ ಒದಗಿಬಂದರೂ ಅದನ್ನು ತ್ಯಾಗ ಮಾಡಿ ಮನಮೋಹನಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಅಂತಹ ತಾಯಿಯನ್ನು ಶಾಸಕ ಯತ್ನಾಳರು ವಿಷಕನ್ಯೆ, ಪಾಕ್ ಎಜೆಂಟ್ ಎಂದು ಕೆಟ್ಟ ಶಬ್ದಗಳಿಂದ ಅವಮಾನಿಸಿದ್ದು ಖಂಡನೀಯ ಎಂದರು.
ಶಾಸಕರಾದವರು ಕೇವಲ ಒಂದು ಧರ್ಮಕ್ಕೆ ಸೀಮಿತರಲ್ಲ. ಅವರು ಇಡೀ ಮತಕ್ಷೇತ್ರದ ಜನತೆಗೆ ಶಾಸಕರು ಎಂಬ ಕನಿಷ್ಠ ತಿಳುವಳಿಕೆಯೂ ಶಾಸಕ ಯತ್ನಾಳರಿಗಿಲ್ಲ. ತಮ್ಮ ಕಚೇರಿಗೆ ಟೋಪಿ ಹಾಕಿದವರು, ಗಡ್ಡ ಬಿಟ್ಟವರು, ಬುರ್ಕಾ ಹಾಕಿದವರು ಬರಬಾರದೆಂಬ ಹೇಳಿಕೆ ನೀಡಿ ಮುಸ್ಲಿಂ ಬಂಧುಗಳಿಗೆ, ಮುಸ್ಲಿಂ ತಾಯಂದಿರಿಗೆ ಅವಮಾನಿಸುತ್ತಾರೆ. ಹೀಗಾಗಿ ನಾನು ಮತ್ತು ಅಬ್ದುಲ್ ಹಮೀದ ಮುಶ್ರಿಫ್ ಅವರು, ನಿಮ್ಮ ಸಮಸ್ಯೆಗಳೇನಾದರೂ ಇದ್ರೆ ನಮ್ಮ ಕಚೇರಿಗೆ ಬನ್ನಿ ಎಂದು ಅವರಿಗೆ ಹೇಳಿದ್ದೇವೆ. ಅವರ ಸಮಸ್ಯೆಗೆ ನಾವು ಸ್ಪಂದಿಸುತ್ತಿದ್ದೇವೆ ಎಂದು ಹೇಳಿದರು.
ಶಾಸಕ ಯತ್ನಾಳ ಅವರಿಗೆ ಅವರ ತಂದೆ ಬಸವಣ್ಣನವರ ಹೆಸರು ಇಟ್ಟಿದ್ದಾರೆ. ಆದರಿವರು ಬಸವಣ್ಣನವರ ಆಚಾರ-ವಿಚಾರಗಳಿಗೆ, ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿದ್ದಾರೆ. ಇಂತವರನ್ನು ಬಸವ ಜನ್ಮಭೂಮಿಯ ಜನತೆ ಒಪ್ಪಲ್ಲ. ಇವರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಎಐಸಿಸಿ ಚುನಾವಣೆ ವೀಕ್ಷಕಿ ಪ್ರೀತಿ ಜಸ್ವಾಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಬಿಎಲ್ಡಿಇ ಪ್ರಚಾರಾಧಿಕಾರಿ ಮಾಹಾಂತೇಶ ಬಿರಾದಾರ ಇದ್ದರು.
ಮೊಸಳೆ ಕಣ್ಣೀರಿನ ಅಭ್ಯರ್ಥಿ
ತಮ್ಮ ಪತ್ನಿ ಆಶಾ ಪಾಟೀಲ ಅವರ ಪ್ರಚಾರ ಸಭೆಯಲ್ಲಿನ ದಾಂಧಲೆ ಕುರಿತ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ ಅವರು, ತಮ್ಮ ಪ್ರತಿಸ್ಪರ್ಧಿ ಬಬಲೇಶ್ವರ ಅಭ್ಯರ್ಥಿಯ ಚರಿತ್ರೆ ಎಲ್ಲರಿಗೂ ಗೊತ್ತಿದ್ದದ್ದೇ ಆಗಿದೆ. ಹಿಂದಿನ ೩ ಚುನಾವಣೆಗಳನ್ನು ಗೂಂಡಾಗಿರಿ ಮೂಲಕವೇ ಎದುರಿಸಿ ಮಣ್ಣು ಮುಕ್ಕಿದರು. ಅದಕ್ಕೆ ಈ ಬಾರಿ ತಮ್ಮ ವರಸೆ ಬದಲಿಸಿ ಝಂಡುಬಾಮ್, ಗ್ಲೀಸರೀನ್ ಹಚ್ಚಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹೋದಲ್ಲೆಲ್ಲ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ. ಇವರಿಂದ ಎಷ್ಟು ಮನೆಗಳು ಮುರಿದಿವೆ, ಎಷ್ಟು ಜನ ಹಾಳಾಗಿದ್ದಾರೆ ಎಂಬುದು ಜನತೆಗೆ ಗೊತ್ತು. ಇವರ ಈ ನಾಟಕ, ಸೋಗು ಜನರು ನಂಬಲ್ಲ. ಅಭಿವೃದ್ಧಿಯ ಕುರಿತು ಏನನ್ನೂ ಹೇಳದೇ ಈ ನಾಟಕ ಶುರುವಿಟ್ಟುಕೊಂಡಿದ್ದಾರೆ. ರಾಜಕೀಯ ಪರಿಸ್ಥಿತಿ ಎಲ್ಲಿಗೆ ಬಂತು ನೋಡಿ ಎಂದು ವ್ಯಂಗ್ಯವಾಡಿದರು.
ಎಂ.ಬಿ.ಪಾಟೀಲ ಅಂದ್ರೆ ನೀರು
ರಾಜ್ಯದಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲಗೊಂಡಿದ್ದು ಅದರ ನಾಯಕತ್ವ ಖತಂಗೊಂಡಿದೆ. ಶೇ ೪೦ ಭ್ರಷ್ಟಾಚಾರದ ಪ್ರಭಾವದಿಂದಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಡಬಲ್ ಎಂಜಿನ್ ಸರಕಾರದ ಎರಡೂ ಇಂಜಿನ್‌ಗಳು ರಿಪೇರಿಯಾಗದಷ್ಟು ಕೆಟ್ಟು ಹೋಗಿದ್ದು ಅವುಗಳನ್ನು ಗುಜರಿಗೆ ಹಾಕುವ ಕಾಲ ದೂರವಿಲ್ಲ ಎಂದು ಎಂ.ಬಿ.ಪಾಟೀಲ ವ್ಯಂಗ್ಯವಾಡಿದರು.
ಮಹಾರಾಷ್ಟç ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲರು, ಯಾರೋ ಬರೆದುಕೊಟ್ಟ ಅವರ ಹೇಳಿಕೆಗೆ ಮಹತ್ವ ಕೊಡಲ್ಲ. ಲಿಂ. ಸಿದ್ದೇಶ್ವರ ಶ್ರೀಗಳು ಎಂ.ಬಿ.ಪಾಟೀಲ ಅಂದ್ರೆ ನೀರು, ನೀರು ಅಂದ್ರೆ ಎಂ.ಬಿ.ಪಾಟೀಲ ಅಂತ ಹೇಳಿದ್ದಾರೆ ಆ ಸರ್ಟಿಫಿಕೇಟ್ ಒಂದು ಸಾಕು ನನಗೆ ಎಂದುತ್ತರಿಸಿದರು.