ಡಿ.25 ರಿಂದ ಜ.2 ರವರೆಗೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ದಿ.25 ರಿಂದ ಜನೆವರಿ 2 2025 ರ ವರೆಗೂ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ ನಡೆಯಲಿದ್ದು, ಈ ಜ್ಞಾನ ಯಜ್ಞದಲ್ಲಿ ಎಲ್ಲರೂ ಭಾಗವಹಿಸಿ ಗುರುದೇವರ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಪ್ರಚಾರ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಅಪ್ಪಾವರ ಗುರುನಮನ ಕಾರ್ಯಕ್ರಮ ಎಂದರೆ ಅದೊಂದು ಜ್ಞಾನದ ಯಜ್ಞ ಇದ್ದಂತೆ, 9 ದಿನಗಳ ಕಾಲ ಈ ವಿಶೇಷ ಮಹೋತ್ಸವದಲ್ಲಿ ಸಿದ್ದೇಶ್ವರ ಅಪ್ಪಾವರು, ಪ್ರಚಾರದಿಂದ ಬಹಳಷ್ಟು ದೂರ ಉಳಿದುಕೊಂಡಿದ್ದರು. ಆದರೆ ಅವರ ಪ್ರವಚನಗಳೇ ಅವರಿಗೆ ಸಾಕಷ್ಟು ಪ್ರಚಾರ ಕೊಟ್ಟಿವೆ. ಹಾಗಾಗಿ ಅವರ ಪ್ರವಚನಗಳ ಸಾರವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.
ಆಶ್ರಮದ ಹರ್ಷಾನಂದ ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರುನಮನ ಮಹೋತ್ಸವ ಅಂಗವಾಗಿ 9 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿ.25-12-2024 ರಂದು “ಸುಧಾರಿತ ಕೃಷಿ” ಕುರಿತಾಗಿ ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಹಾಗೂ ಎ.ಎಸ್.ಆನಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ದಿ.26-12-2024 ವಿದ್ಯಾರ್ಥಿಗಳಿಗಾಗಿ ಮಹೇಶ ಮಾಶಾಳ ಅವರು “ಜ್ಞಾನರಾಧನೆ” ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ.
ಅದರಂತೆ ದಿ. 27-12-2024 ರಂದು “ಗ್ರಾಮ ಸಂಸ್ಕೃತಿ” ಎಂಬ ವಿಚಾರ ಗೋಷ್ಠಿ ನಡೆಯಲಿದ್ದು, ಜಾನಪದ ಸಾಹಿತಿ ಸಿದ್ದಪ್ಪ ಬೀದರಿ ಗ್ರಾಮೀಣ ಬದುಕಿನ ಸೊಗಡು, ಆಚಾರ-ವಿಚಾರಗಳ ಭವ್ಯ ಸಂಸ್ಕೃತಿಯನ್ನು ಅನಾವರಣಗೊಳಿಸಲಿದ್ದಾರೆ.
ದಿ.28-12-2024 ರಂದು ಯೋಗ ಜೀವನ ಎಂಬ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಲಿದ್ದು, ಜ್ಞಾನಯೋಗಿಗಳಾದ ಸಿದ್ದೇಶ್ವರ ಸ್ವಾಮೀಜಿ ಅವರ ಜೀವನ ಆಧಾರಿತ ಉಪನ್ಯಾಸವನ್ನು ಉಪ ಕುಲಪತಿಗಳಾದ ಎಸ್. ವ್ಯಾಸ, ಡಾ. ಎಚ್. ಆರ್. ನಾಗೇಂದ್ರ ಜೀ ಹಾಗೂ ಡಾ. ಪ್ರಶಾಂತ ಕಡಕೊಳ ನೀಡಲಿದ್ದಾರೆ.
ದಿ. 29-12-2024 ರಂದು “ಮಾತೃ ಭಕ್ತಿ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಡಾ. ವಿಜಯಲಕ್ಷ್ಮಿ ಬಾಳೆಕುಂದರಿ ನಡೆಸಿಕೊಡಲಿದ್ದಾರೆ.
ದಿ.30-12-2024 “ಜಾಗತಿಕ ತತ್ವ ಚಿಂತನೆಗಳು” ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮವಿದ್ದು, ಉಚ್ಚ ನ್ಯಾಯಾಲಯದ ನ್ಯಾಯಾದೀಶ ಕೃಷ್ಣ ದೀಕ್ಷಿತ್ ನಡೆಸಿಕೊಡಲಿದ್ದಾರೆ.
ದಿ. 31-12-2024 ರಂದು “ಸೇವಾ ಭಾವ” ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಸ್ಕಾಂ ಅಧಿಕಾರಿ ಮಹಾಂತೇಶ ಬೀಳಗಿ ಮಾತನಾಡಲಿದ್ದಾರೆ.
ಹಿರಿಯ ವರದಿಗಾರ ವಾಸುದೇವ ಹೇರಕಲ್ಲ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಲ್ಲ ಪ್ರಚಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಿಶೇಷ ಕಾರ್ಯಕ್ರಮಗಳು
ದಿ.01-01-2025 ರಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರಿಗೆ “ದೀಪ ನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು 87 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಗುರು ಚನ್ನಬಸಪ್ಪನವರು ಉಪನ್ಯಾಸ ನೀಡಲಿದ್ದಾರೆ. ಅಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಆಶ್ರಮದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಿ ದೀಪ ನಮನ ಸಲ್ಲಿಸಲಾಗುವುದು.
ದಿ. 02-01-2025 ರಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಪುಷ್ಪ ನಮನ ಸಲ್ಲಿಸಲಾಗುವುದು. ಅಂದು ರಾಜ್ಯದ ವಿವಿಧ ಮಠಾದೀಶರು, ಸಂತರು, ಜಿಲ್ಲೆಯ ರಾಜಕಾರಣಿಗಳು, ರಾಜ್ಯಪಾಲರು, ಸಾಹಿತಿಗಳು, ಸಂಶೋಧಕರು ಸೇರಿದಂತೆ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.