ಸಣ್ಣ ಕಥೆ
ಲೇಖಕರು
-ವಿಜಯಲಕ್ಷ್ಮಿ ಮೂರ್ತಿ ✍️
ಉದಯರಶ್ಮಿ ದಿನಪತ್ರಿಕೆ
ಬೆಳಿಗ್ಗೆ ಅನಿತಾ ತುಂಬಾ ಹರ್ಷದಿಂದ ತನ್ನ ಮನೆಯಿಂದ ಹೊರಟಿದ್ದಳು. ಬಸ್ ಕಾಯುತ್ತಾ ನಸು ನಗುತ್ತಿರುವ ಅವಳನ್ನು ಸ್ವಲ್ಪ ದೂರದಿಂದ ಬರುತ್ತಿದ್ದ ಅವಳ ಸ್ನೇಹಿತೆ ಅಮೂಲ್ಯ ಗಮನಿಸಿದ್ದಳು. ಅನಿತಾ ಹೀಗೆ ನಗುತ್ತಿರುವುದನ್ನು ನೋಡಿದ್ದೇ ಇವತ್ತು.. ಹಿಂದಿನ ದಿನ ಅವಳಿಗೆ ಕೆಲಸದ ಇಂಟರ್ವ್ಯೂ ಇತ್ತು. ಆ ಕೆಲಸ ಸಿಕ್ಕಿರಬಹುದು ಅದಕ್ಕೆ ಖುಷಿಯಾಗಿದ್ದಾಳೆ. ಎಂದು ಯೋಚಿಸಿದಳು ಅಮೂಲ್ಯ.
ಹತ್ತಿರ ಬಂದ ಅಮೂಲ್ಯ ಅವಳನ್ನು ಕುರಿತು, ಅನಿತಾ.. ಏನು ಕನಸು ಕಾಣುತ್ತೀಯಾ? ಎಂದಾಗ ಪೂರ್ತಿ ಎಚ್ಚರವಾಯಿತು ಅನಿತಾಳಿಗೆ.. ಅಮ್ಮು, ನಿನ್ನನ್ನೇ ಕಾಯುತ್ತಿದ್ದೆ. ನಿನ್ನೆ ಹೋದ ಕೆಲಸ ಸಿಕ್ಕಿತು. ಆ ಆಫೀಸ್ ಬಾಸ್ ನಮಗೆ ಗೊತ್ತಿರುವವರು.. ಹೌದಾ! ಯಾರು ಅದು? ಎಂದ ಅಮೂಲ್ಯಳಿಗೆ ಅನಿತಾ.. ನಸು ನಗುತ್ತಾ.. ನೋಡು ನೀನೇ.. ಇವತ್ತು ಬೇರೆ ಕೆಲಸ ನಾವು ಹುಡುಕಲು ಹೋಗುವುದು ಬೇಡ. ನನಗೆ ಕೆಲಸ ಸಿಕ್ಕಿದ ಆಫೀಸ್ ನಲ್ಲಿ ನಿನಗೂ ಕೆಲಸಕ್ಕೆ ಬರಲು ಹೇಳಿದ್ದಾರೆ ನಮ್ಮ ಬಾಸ್ ಎಂದ ಅನಿತಾಳನ್ನು ಬೆರಗಿನಿಂದ ನೋಡಿದಳು.
ದೊಡ್ಡ ಕಟ್ಟಡದ ಮುಂದೆ ನಿಂತ ಅನಿತಾ, ಇದೇ ನಮ್ಮ ಆಫೀಸ್ ಅಂದಳು. ಇಷ್ಟು ದೊಡ್ಡದಾ? ಯಾರಪ್ಪ! ಇದರ ಯಜಮಾನರು ಎಂದು ಅಂದುಕೊಳ್ಳುತ್ತಾ ಅನಿತಾಳನ್ನು ಹಿಂಬಾಲಿಸಿದಳು ಅಮೂಲ್ಯ. ಅಲ್ಲಿಯ ರಿಸೆಪ್ಶನಿಸ್ಟ್ ಇವರಿಬ್ಬರು ಬಂದಿರುವುದಾಗಿ ಬಾಸ್ ಗೆ ಫೋನ್ ಮಾಡಿದಳು. ಕೂಡಲೇ ಕಳಿಸು ಎಂದು ಬಾಸ್ ಹೇಳಿದ ಮೇಲೆ ಅನಿತಾ ಅಮೂಲ್ಯಳ ಕೈ ಹಿಡಿದು ಬಾಸ್ ಕ್ಯಾಬಿನ್ ಗೆ ಹೋದಳು.
ಒಂದು ಕ್ಷಣ ಆಫೀಸ್ ಕ್ಯಾಬಿನ್ನಲ್ಲಿ ಕೂತ ಶರತ್ ನನ್ನು ನೋಡಿ ಅಮೂಲ್ಯಳ ಕಣ್ಣುಗಳು ಅರಳಿದವು. ಅವನೂ ಸಹ ಅಮೂಲ್ಯಳನ್ನೇ ನೋಡುತ್ತಿದ್ದ. ನೀವು ಇಲ್ಲಿ ಹೇಗೆ? ಎಂದ ಅಮ್ಯೂಲಳಿಗೆ ನಗುತ್ತಾ, ಇದು ನನ್ನ ತಂದೆಯ ಆಫೀಸ್. ನಾನು ಒಬ್ಬ ಕೆಲಸಗಾರ ಇಲ್ಲಿ ಎಂದ. ಬನ್ನಿ ಕುಳಿತುಕೊಳ್ಳಿ ಇಬ್ಬರೂ ಎಂದು ಬೆಲ್ ಮಾಡಿ ಬಂದ ಅಟೆಂಡರ್ ಗೆ ಎರಡು ಐಸ್ ಕ್ರೀಮ್ ತರಲು ಹೇಳಿದ. ಅದೂ ಮ್ಯಾಂಗೋ ಐಸ್ ಕ್ರೀಮ್ ತರಲು ಹೇಳಿದ್ದು ನೋಡಿ ಅಮೂಲ್ಯಳ ಕಣ್ಣಲ್ಲಿ ನೀರು ತುಂಬಿತು.
ಹಿಂದಿನದು ನೆನಪಿದೆಯಾ? ಎಂದ ಅಮ್ಮುಗೆ.. ಎಲ್ಲವೂ ನೆನಪಿದೆ.. ನನ್ನ ಆಕ್ಸಿಡೆಂಟ್ ನಿಮ್ಮ ಊರಿನ ಹೈವೇಯಲ್ಲಿ ಆಗಿದ್ದು, ಆದ ಮೇಲೆ ನಿಮ್ಮ ಊರಲ್ಲಿ ನಿಮ್ಮ ಮನೆಯವರ ಹತ್ತಿರ ಸೇವೆ ಮಾಡಿಸಿಕೊಂಡಿದ್ದು.. ಹುಷಾರಾದ ಮೇಲೆ ನನ್ನ ಅಪ್ಪ ಬಂದು ನನ್ನನ್ನು ಕರೆದುಕೊಂಡು ಹೋಗಿದ್ದು. ನಮ್ಮ ತಂದೆ ಏನಾದರೂ ಸಹಾಯ ಬೇಕಿದ್ದರೆ ಹೇಳಿ ಎಂದು ನಿಮ್ಮ ಮನೆಯವರಿಗೆ ಫೋನ್ ನಂಬರ್ ಕೊಟ್ಟಿದ್ದು. ಎಲ್ಲಾ ಸರಿಯಾಗಿ ನೆನಪಿದೆ. ನೀನು, ಅನಿತಾ ಕೈ ಹಿಡಿದು ನಿಂತಿದ್ದು.. ನನಗೆ ವಿದಾಯ ಹೇಳಿದ್ದು...
ನಿನ್ನೆ ಅನಿತಾಳನ್ನು ನೋಡಿ ಖುಷಿಯಾಯಿತು. ನೀವಿಬ್ಬರೂ ನಿಮ್ಮ ಊರಲ್ಲಿ ಡಿಗ್ರಿ ಮಾಡಿ ಇಲ್ಲಿ ನೆಂಟರ ಮನೆಯಲ್ಲಿ ಇದ್ದು ಕೆಲಸ ಹುಡುಕುತ್ತಿರುವುದು ಗೊತ್ತಾಯಿತು. ನನ್ನ ತಂದೆಗೆ ನೀವು ಫೋನ್ ಮಾಡಿದ್ದರೆ ನಿಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಈಗಲೂ ತಡವಾಗಿಲ್ಲ.. ನನ್ನ ತಂದೆಯ ಒಪ್ಪಿಗೆ ಪಡೆದು ನಾನು ನಿಮ್ಮಿಬ್ಬರಿಗೆ ಕೆಲಸಕ್ಕೆ ಕರೆದೆ ಎಂದು ಅಮೂಲ್ಯಳ ಕಡೆ ನೋಡುತ್ತಾ ಹೇಳಿದ.
ಅಮೂಲ್ಯ ಹಾಗೂ ಅನಿತಾ ಇಬ್ಬರ ಕಂಗಳು ಸಂತಸದಿಂದ ವಂದನೆ ಹೇಳಿದವು ಶರತ್ ಗೆ. ಶರತ್ ತನ್ನ ಜೀವ ಉಳಿಸಿದ ದೇವತೆಗಳನ್ನು ಕಣ್ಣು ತುಂಬಿ ನೋಡಿ ಮತ್ತೊಮ್ಮೆ ವಂದನೆ ಕಣ್ಣಲ್ಲೇ ತಿಳಿಸಿದ.