ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ೨೦೨೪-೨೫ ಸಾಲಿನ ಮಹಾತ್ಮ ಗಾಂಧಿ ಗ್ರಾಮ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸಂಗನಗೌಡ ಬಿರಾದಾರ ಅವರು ಬೂದು ನೀರು ನಿರ್ವಹಣೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಸಾಲಿನ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ೯೪. ೦೦ ಲಕ್ಷ ವೆಚ್ಚದ ಕಾಮಗಾರಿಯನ್ನು ಬ್ರಹ್ಮದೇವನಮಡು ಗ್ರಾಮದಲ್ಲಿ ಕೈಗೊಂಡಿದ್ದೇವೆ ಎಂದರು.
ಗ್ರಾಮದ ಸಹಕಾರದೊಂದಿಗೆ ಈ ಯೋಜನೆಗಳನ್ನು ಹಂತ ಹಂತವಾಗಿ, ಹಲವಾರು ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದೇನೆ. ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿಸಿದ್ದೇನೆ. ಸರ್ಕಾರ ಮಟ್ಟದಲ್ಲಿ ಕಾಮಗಾರಿಗಳಿಗೆ ಮಂಜೂರಾತಿಯನ್ನು ಮಾಡಿಸಿಕೊಂಡು ಬಂದು ಪ್ರತಿ ಗ್ರಾಮದ ಕುಂದು ಕೊರತೆಗಳನ್ನು ಪರಿಶೀಲಿಸಿ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇನೆ ಎಂದರು.
ನಂತರ ಮಾತನಾಡಿದ ಸಿಂದಗಿ ತಾಲೂಕು ಕಾಂಗ್ರೆಸ್ ಮುಖಂಡ ವಿಜುಗೌಡ ಬಿರಾದಾರ ಅವರು, ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗಾಗಿ ನಮ್ಮ ಪಕ್ಷವೂ ಬದ್ಧವಾಗಿದೆ, ಪ್ರತಿಯೊಬ್ಬ ಬಡವರಿಗೂ, ಯೋಜನೆಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ ಎಂದರು.
ನಮ್ಮ ಅಧಿಕಾರ ಅವಧಿಯಲ್ಲಿ, ಇನ್ನೂ ಹಲವಾರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಪಕ್ಷಭೇದ ಮರೆತು ಗ್ರಾಮಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಪ್ರತಿ ಗ್ರಾಮಗಳ ಕೊಳಚೆ ನಿರ್ಮೂಲನೆ, ಮೂಲಸೌಕರ್ಯ ಬಡವರಿಗೆ ಮನೆಗಳನ್ನು ಮಂಜೂರಾತಿ ಮಾಡಿಸಿದ್ದೇವೆ. ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮವು ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ನಿರ್ಮಲ ಗ್ರಾಮ ಸುಂದರ ಗ್ರಾಮವಾಗಿ, ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಯಿಪಟೇಲ್ ಮುರುಡಿ, ಕಾಂಗ್ರೆಸ್ ಯುವ ಮುಖಂಡ ಹನುಮಂತರಾಯಗೌಡ ಬಿರಾದಾರ, ಸೈಯದ್ ಮುರಳ, ಗುತ್ತಪ್ಪಗೌಡ ಬೋನಾಳ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಯ್ಕೋಡಿ ಮತ್ತು ಗ್ರಾಮದ ಹಿರಿಯರು, ಯುವ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು