4ನೇ ವಾರ್ಷಿಕ ಆರ್.ಡಿ.ಪಿ.ಆರ್. ಕ್ರೀಡಾಕೂಟ-೨೦೨೪ ಕ್ಕೆ ಚಾಲನೆ ನೀಡಿದ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾವೆಲ್ಲ ವೃತ್ತಿಗೆ ಪೂರಕವಾಗಿ ಕ್ರೀಡೆಗಳಲ್ಲಿಯೂ ಭಾಗವಹಿಸಿ, ಸದೃಢರಾಗಬೇಕು. ನಮ್ಮ ದೇಹ ಸದೃಢ ಇದ್ದಾಗ ಮಾತ್ರ ನಮ್ಮ ಕುಟುಂಬದ ಆರೋಗ್ಯ ಸ್ಥಿರವಾಗಿರಲು ಸಾಧ್ಯ ಎಂದು ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತಿ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತಿ ವಿಜಯಪುರ, ಆರ್.ಡಿ.ಪಿ.ಆರ್. ಇಲಾಖೆಯ ಎಲ್ಲ ವೃಂದ ಸಂಘಗಳ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಡಿ.24, 25 ಮತ್ತು 26 ರಂದು ನಡೆಯಲಿರುವ 4ನೇ ವಾರ್ಷಿಕ ಕ್ರೀಡಾಕೂಟ-2024 ಉದ್ಘಾಟನಾ ಸಮಾರಂಭವನ್ನು ಬಲೂನುಗಳನ್ನು ಆಕಾಶದಲ್ಲಿ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಿಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಪ್ರತಿದಿನ ನಿರಂತರ ಕೆಲಸದ ಒತ್ತಡದಲ್ಲಿ ಆರೋಗ್ಯದ ಕಡೆಗೂ ಸಹ ಗಮನ ವಹಿಸಬೇಕು. ಕ್ರೀಡಾಕೂಟದಲ್ಲಿ ಸಾಕಷ್ಟು ಕಲಿಕೆಗಳಿರುತ್ತವೆ. ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ದೇಹಕ್ಕೆ ಬಹಳ ಲಾಭಗಳಿರುತ್ತವೆ. ಆದ್ದರಿಂದ ಈ 3 ದಿನಗಳ ಕ್ರೀಡಾಕೂಟದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿ ಎಂದರು.
ಜಿ.ಪಂ. ಸಿಇಓ ರಿಷಿ ಆನಂದ ಮಾತನಾಡಿ, ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕ್ರೀಡೆಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿ, ಸಮೃದ್ಧವಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆರೋಗ್ಯವಂತ ದೇಹದಿಂದ ಮಾತ್ರ ಮನಸ್ಸು ಆರೋಗ್ಯವಾಗಿರಲು ಸಾಧ್ಯ. ನಾವು ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು. ಆದ್ದರಿಂದ ಜೀವನದಲ್ಲಿ ಕ್ರೀಡೆಗಳು ಅವಶ್ಯಕ. ಕ್ರೀಡೆ ನಮ್ಮನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿಸುತ್ತದೆ. ಇದು ಮನರಂಜನೆ ಮತ್ತು ದೈಹಿಕ ಚಟುವಟಿಕೆಯ ಅತ್ಯಂತ ಉಪಯುಕ್ತ ಸಾಧನವಾಗಿದೆ. ಇವತ್ತು ಜಿಲ್ಲೆಯ 13 ತಾಲೂಕುಗಳಿಂದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಭಾಗವಹಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜಿ.ಪಾರೆ ಮಾತನಾಡಿ, ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ. ಎಸ್. ರಾಠೋಡ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಬಿಲಾಲ ಗಬಸಾವಳಗಿ, ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಿ. ಎಸ್. ಕುಂಬಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ. ಅಲ್ಲಾಪೂರ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಜಿಲ್ಲಾ ಮಟ್ಟದ ಅಕ್ಷರ ದಾಸೋಹ ಶಾಖೆಯ ಶಿಕ್ಷಣಾಧಿಕಾರಿ ಎಸ್. ಜೆ. ನಾಯಕ, ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ ಮತ್ತು ಪಂ.ರಾ) ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆರ್.ಡಿ.ಪಿ.ಆರ್. ಇಲಾಖೆಯ ಎಲ್ಲ ವೃಂದ ಸಂಘಗಳ ಪದಾಧಿಕಾರಿಗಳು, ಜಿ.ಪಂ, ತಾ.ಪಂ, ಗ್ರಾಪಂ.ಗಳ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ರೀಡಾಳುಗಳನ್ನು ಹುರಿದುಂಬಿಸಿದ ಎಸ್ಪಿ, ಸಿಇಓ
ಸಮಾರಂಭ ಬಳಿಕ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಖುದ್ದಾಗಿ ಕ್ರೀಡಾಂಗಣಕ್ಕೆ ಆಗಮಿಸಿ, ಕ್ರಿಕೆಟ್ ಆಟದಲ್ಲಿ ಭಾಗವಹಿಸಿದರು. ಈ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
“ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವು ಪ್ರತಿನಿತ್ಯ ನಮ್ಮ ನಮ್ಮ ಕೆಲಸಗಳಲ್ಲಿ ನಿರತರಾಗಿರುತ್ತೇವೆ. ಇದರ ಮಧ್ಯ ನಮ್ಮಲ್ಲಿ ವಿವಿಧ ಸಾಂಸ್ಕೃತಿಕ ಪ್ರತಿಭೆಗಳು ಹಾಗೂ ಆಟಗಳು ಇರುತ್ತವೆ. ಅವುಗಳನ್ನು ಹೊರಹಾಕಲು ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪಲಿತಾಂಶ ಏನೇ ಇರಲಿ, ಸೋಲು ಗೆಲುವುಗಳನ್ನು ನಾವು ಸಮಾನವಾಗಿ ಸ್ವೀಕರಿಸಬೇಕು. ಇದಕ್ಕಿಂತ ಮುಖ್ಯವಾಗಿ ಭಾಗವಹಿಸುವಿಕೆ ತುಂಬಾ ಮುಖ್ಯ. ಸಂತೋಷದಿಂದ ನಿಯಮಗಳನುಸಾರ ಆಟಗಳಲ್ಲಿ ಭಾಗವಹಿಸಬೇಕು. ಆಟಗಳಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.”
– ರಿಷಿ ಆನಂದ
ಜಿಪಂ ಸಿಇಓ, ವಿಜಯಪುರ