ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷರಾಗಿ ಮಲ್ಲೇಶಿ ಕಡಕೋಳ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.
ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಈಚೆಗೆ ಜರುಗಿದ ಚುನಾವಣೆಯಲ್ಲಿ ಸಂಗನಗೌಡ ಚಿಕ್ಕೊಂಡ ಅವರ ಗುಂಪಿಗೆ(-ನಲ್) ಮತದಾರರು ಭರ್ಜರಿ ಗೆಲುವು ತಂದು ಕೊಟ್ಟಿದ್ದರು. ಇಂದು ಜರುಗಿದ ಅಧ್ಯಕ್ಷ ಸ್ಥಾನಕ್ಕೆ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶಿ ಕಡಕೋಳ ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೆ ಒಬ್ಬಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಜರುಗಿತು. ಸಂಗನಗೌಡ ಚಿಕ್ಕೊಂಡ ಅವರು ಕಳೆದ ಐದು ಅವಧಿಯಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಆರನೇ ಅವಧಿಗೆ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವದು ಸಂಘದ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಜರುಗಿದ ಸಮಾರಂಭದಲ್ಲಿ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಅವರು ಹಿರಿಯ ರೈತ ಬಾಂಧವರಿಗೆ ಪಾದಪೂಜೆ ಮಾಡುವ ಮೂಲಕ ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದು ವಿಶೇಷ ಗಮನ ಸೆಳೆಯಿತು. ಸಂಗನಗೌಡ ಚಿಕ್ಕೊಂಡ ಅವರು ಅಧ್ಯಕ್ಷರಾದ ನಂತರ ತಮ್ಮ ಅವಧಿಯಲ್ಲಿ ಒಂದಿಲ್ಲೊಂದು ವಿಶೇಷವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೈತರ ಮೇಲಿನ ಪ್ರೇಮ,ಕಾಳಜಿ ವ್ಯಕ್ತಪಡಿಸುವದು ಇವರ ಗುಣವಿಶೇಷ.
ನೂತನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ರೈತ ಬಾಂಧವರ ಸಹಕಾರದಿಂದ ಚುನಾವಣೆಯಲ್ಲಿ ನಾವು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ರೈತರ ಜೀವನಾಡಿಯಾಗಿ, ರೈತರ ಸಹಕಾರಿಯಾಗಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವದು. ರೈತ, ಯೋಧ ದೇಶದ ಎರಡು ಕಣ್ಣುಗಳಿದ್ದಂತೆ. ಯೋಧ ದೇಶದ ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡಿದರೆ, ರೈತರು ಇಡೀ ಜಗತ್ತಿಗೆ ಅನ್ನವನ್ನು ನೀಡುತ್ತಾನೆ. ದೇಶದ ಯಾವುದೇ ಪ್ರತಿಷ್ಠಿತ ಕಂಪನಿ,ಕಾರ್ಖಾನೆ ಒಬ್ಬ ವ್ಯಕ್ತಿಗೆ ಉದ್ಯೋಗವನ್ನು ನೀಡಬಹುದು. ಅದೇ ಬದುಕಲು ಅಗತ್ಯವಿರುವ ಅನ್ನವನ್ನು ನೀಡಲು ಸಾಧ್ಯವಿಲ್ಲ. ರೈತ ಬಾಂಧವರು ಜಗತ್ತಿನ ಪ್ರತಿಯೊಬ್ಬರಿಗೂ ಅನ್ನವನ್ನು ನೀಡುತ್ತಾರೆ. ಇವರಿಬ್ಬರೂ ಸದಾ ಸ್ಮರಣೀಯರಾಗಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಂಗನಗೌಡ ಚಿಕ್ಕೊಂಡ ಅವರು ಸಂಘದ ಅಧ್ಯಕ್ಷರಾದ ನಂತರ ಹಲವಾರು ರೈತಪರ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ. ಇವರು ನೂತನವಾಗಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ರೈತ ದಿನಾಚರಣೆ ದಿನವಾಗಿರುವದು ವಿಶೇಷವಾಗಿದೆ. ಈ ದಿನದಂದು ರೈತರಿಗೆ ಪಾದಪೂಜೆ ಮಾಡಿರುವದು ಸುತ್ತ್ಯರ್ಹ ಕಾರ್ಯ. ಇವರಿಂದ ರೈತ ಬಾಂಧವರಿಗೆ ಹೆಚ್ಚು ಯೋಜನೆಗಳು ಬರುವಂತಾಗಲೆಂದು ಆಶಯವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನೂತನ ನಿರ್ದೇಶಕ ಈರಣ್ಣ ವಂದಾಲ, ಶ್ರೀಶೈಲ ಪರಮಗೊಂಡ, ಮುತ್ತು ಉಕ್ಕಲಿ, ಸಂಗನಬಸಪ್ಪ ನಾಯ್ಕೋಡಿ, ಸುರೇಶ ನಾಯಕ, ನಿಂಗಪ್ಪ ಕುಳಗೇರಿ, ಮಹಾದೇವಿ ಮೈಲೇಶ್ವರ, ಜಯಶ್ರೀ ಪಾಟೀಲ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಚಿಕ್ಕೊಂಡ, ಸಿಬ್ಬಂದಿಗಳಾದ ಅಶೋಕ ಡೋಮನಾಳ, ಮಹೇಶ ಅವಟಿ, ಶ್ರೀಶೈಲ ಮುರಾಳ, ವಿಶ್ವನಾಥ ಕಡಕೋಳ, ಶಂಕರಲಿಂಗ ಅಡಗಿಮನಿ, ಪಾವಡೆಪ್ಪ ಹೆಬ್ಬಾಳ ಇತರರು ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಚಿಕ್ಕೊಂಡ ಸ್ವಾಗತಿಸಿ, ನಿರೂಪಿಸಿದರು.