ವಿಜಯಪುರ: ವಿಶ್ವಗುರು ಬಸವಣ್ಣನವರ ಸಾಮಾಜಿಕ ನ್ಯಾಯ ಅನುಸರಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.೨೯ರಂದು ಶನಿವಾರ ಮಧ್ಯಾಹ್ನ ೧೨.೧೫ಕ್ಕೆ ಬಸವನಾಡು ವಿಜಯಪುರಕ್ಕೆ ಆಗಮಿಸಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾದ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ತಿಳಿಸಿದ್ದಾರೆ.
ಶುಕ್ರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏ.೨೯ ರಂದು ಕರ್ನಾಟಕ ಚುನಾವಣೆ ಪ್ರಚಾರದ ಮೊದಲ ಸಭೆಯನ್ನು ಹುಮನಾಬಾದಲ್ಲಿ ಮುಗಿಸಿ ಅಲ್ಲಿಂದ ನೇರವಾಗಿ ನಗರದ ಸೈನಿಕ ಶಾಲೆಯಲ್ಲಿ ಪಕ್ಷವು ಆಯೋಜಿಸಲಾದ ಚುನಾವಣೆ ಪ್ರಚಾರದ ಬ್ರಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸುಮಾರು ೨ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ೮೦ ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು ನಗರದ ನಾಲ್ಕು ಕಡೆಗೆ ವಾಹನಗಳ ನಿಲುಗಡೆಗೆ ಪಾರ್ಕಿಗಂಗ್ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳಿಗೆ ೧೦೦೦ ಆಸನಗಳು, ವಿಐಪಿಗಳಿಗೆ ೩೦೦೦ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ವೇದಿಕೆ ಮೇಲೆ ಉಪಸ್ಥಿತರಿರಲು ೧೮-೧೯ ಗಣ್ಯರಿಗೆ ಅವಕಾಶವಿದ್ದು ಜಿಲ್ಲೆಯ ೮ ವಿಧಾನಸಭೆ ಕ್ಷೇತ್ರಗಳ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಸೇರಿ ಒಟ್ಟು ೯ ಜನ ಪಕ್ಷದ ಅಭ್ಯರ್ಥಿಗಳು ವೇದಿಕೆ ಮೇಲಿರಲಿದ್ದಾರೆ ಎಂದು ತಿಳಿಸಿದರು.
ಈ ನೆಲದ ಧಿವ್ಯಚೇತನ ಸಿದ್ದೇಶ್ವರ ಶ್ರೀಗಳ ಪ್ರಭಾವಕ್ಕೊಳಗಾದ ದೂರದೃಷ್ಟಿಯ ನಾಯಕ ನರೇಂದ್ರ ಮೋದಿ ಅವರನ್ನು ಕಾಣಲು ಜಿಲ್ಲೆಯ ಹಳ್ಳಿ-ಹಳ್ಳಿಗಳಲ್ಲೂ ಜನತೆ ಕಾತುರರಾಗಿದ್ದು ಅವರೆಲ್ಲರ ಪಾಲ್ಗೊಳ್ಳುವಿಕೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಾಟೀಲ ಮಾಹಿತಿ ನೀಡಿದರು.
ಮುಖಂಡರಾದ ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ಸಂಜಯ ಪಾಟೀಲ ಕನಮಡಿ ಹಾಗೂ ಮಾಧ್ಯಮ ವಕ್ತಾರ ವಿಜಯ ಜೋಷಿ ಇದ್ದರು.