ವಿಜಯಪುರ: ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಡಿಸಿಎಂ ಮತ್ತು ಹಿರಿಯ ನಾಯಕ ಡಾ. ಜಿ. ಪರಮೇಶ್ವರ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬರುತ್ತವೆ. ನಾವು ಜನರ ಬಳಿಗೆ ಹೋಗಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ಸಿದ್ದಾಂತಗಳನ್ನು ಹೇಳಿ ಮತಗಳನ್ನು ಪಡೆಯಬೇಕು ಹೊರತು ಈ ರೀತಿ ಹಲ್ಲೆ ಮಾಡುವುದು ಖಂಡನೀಯ. ಕಲ್ಲು ತೂರಿದ್ದರಿಂದ ಡಾ. ಜಿ. ಪರಮೇಶ್ವರ ಅವರ ತಲೆಗೆ ಗಾಯವಾಗಿದೆ. ಇದು ಅತ್ಯಂತ ಹೀನಾಯ ಕೃತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರ ಅವರಿಗೆ ಉತ್ತಮ ಆರೋಗ್ಯ ಕೊಡಲಿ. ಅವರು ಶೀಘ್ರ ಗುಣಮುಖವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಹೆಚ್ಚಿನ ಬಹುಮತದಿಂದ ಜಯಗಳಿಸಲಿ ಎಂದು ಎಂ. ಬಿ. ಪಾಟೀಲ ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಕೂಡ ಮಾಡಿರುವ ಎಂ. ಬಿ. ಪಾಟೀಲರು, ಕೆಪಿಸಿಸಿ ಮಾಜಿ ಅಧ್ಯಕ್ಷರು ಮಾಜಿ ಡಿಸಿಎಂ ಆಗಿರುವ ಆತ್ಮೀಯರಾದ ಜಿ. ಪರಮೇಶ್ವರ್ ಅವರ ಮೇಲೆ ಆಗಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ.
ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆಯೇ? ಎಂಬ ಸಂಶಯ ಮೂಡಿದೆ. ಸಿಬಿಐ ಐಟಿ ದಾಳಿಯ ನಂತರ ಇದೀಗ ಬಿಜೆಪಿಯವರ ಕಲ್ಲಿನ ದಾಳಿ ಮುಂದುವರೆದಿದೆ. ಇದಕ್ಕೆ ಈ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರೇ ಉತ್ತರ ನೀಡಲಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.