ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ತಮ್ಮ ಅದೃಷ್ಠ ಪರೀಕ್ಷಿಸಲು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.
ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಘಟಾನುಘಟಿಗಳ ಸ್ಪರ್ಧೆಯಿಂದ ಕಣ ರಂಗೇರಿದೆ. ಇವರಿಗೆ ಎದುರಾಳಿಗಳಾಗಿ ಕಾಂಗ್ರೆಸ್ ಪಕ್ಷದಿಂದ ಸಿಂದಗಿಯ ಮಾಜಿ ಶಾಸಕ ಶರಣಪ್ಪ ಸುಣಗಾರ, ಜೆಡಿಎಸ್ ಪಕ್ಷದಿಂದ ಭೀಮನಗೌಡ (ರಾಜುಗೌಡ) ಪಾಟೀಲ ಕುದರಿಸಾಲವಾಡಗಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯರಶ್ಮಿ” ಶಾಸಕ ಸೋಮನಗೌಡ ಪಾಟೀಲರನ್ನು ಕಂಡು ಅವರ ಮುಂದೆ ಕೆಲ ಪ್ರಶ್ನೆಗಳನ್ನು ಹರವಿದಾಗ ಅವರು ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿದ್ದು ಹೀಗೆ..
ಉದಯರಶ್ಮಿ: ಕ್ಷೇತ್ರದಲ್ಲಿ ತಮ್ಮ ಚುನಾವಣೆ ಪ್ರಚಾರದ ವೈಖರಿ ಹೇಗಿದೆ?
ಸೋಮನಗೌಡ: ವ್ಯವಸ್ಥಿತವಾಗಿ ಸಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸುತ್ತಿರುವೆ. ದೇವರಹಿಪ್ಪರಗಿ ಮತಕ್ಷೇತ್ರ ನಾಲ್ಕು ತಾಲೂಕುಗಳಲ್ಲಿ ಹಂಚಿ ಹೋಗಿದ್ದು ೧೨೦ಕೀ.ಮಿ ಉದ್ದದ ವಿಸ್ತಾರ ಹೊಂದಿದೆ. ವಿಶಾಲ ಕ್ಷೇತ್ರವಾದರೂ ಪ್ರತಿ ಹಳ್ಳಿಗೂ ಭೇಟಿ ನೀಡಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ತಮ್ಮ ಸೇವೆ ಸಲ್ಲಿಸಲು ಇನ್ನೊಂದು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿರುವೆ. ನಾನು ಹೋದಲ್ಲೆಲ್ಲ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ.
ಅಲ್ಲದೇ ಬಿಜೆಪಿ ಪಕ್ಷವು ಪ್ರತಿ ಬೂತ ಮಟ್ಟದಲ್ಲೂ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು ಅವರೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಇದಕ್ಕೆ ಎಲ್ಲೆಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ.
ಉದಯರಶ್ಮಿ: ಕ್ಷೇತ್ರದ ಮತದಾರರು ತಮ್ಮನ್ನೇ ಏಕೆ ಗೆಲ್ಲಿಸಬೇಕು?
ಸೋಮನಗೌಡ: ನಾನು ಯಾವುದೇ ಜಾತಿ-ಮತ-ಪಂಥಗಳಿಗೆ ಸೀಮಿತನಾಗದೇ ಅಭಿವೃದ್ಧಿಯನ್ನೇ ನನ್ನ ಮೂಲ ಮಂತ್ರವನ್ನಾಗಿಸಿಕೊAಡು ಕಾರ್ಯ ಮಾಡಿರುವೆ. ಕ್ಷೇತ್ರದಲ್ಲಿ ೩೫ ಕೆರೆಗಳಿಗೆ ನೀರು ತುಂಬುವ ಯೋಜನೆಯಿಂದ ಅಂತರ್ಜಲ ಹೆಚ್ಚಳಗೊಂಡು ಕೃಷಿಗೆ ಅನುಕೂಲವಾಗಿದೆ. ದೇವರಹಿಪ್ಪರಗಿ ಪಟ್ಟಣದಲ್ಲಿ ಹಲವು ದಶಕಗಳಿಂದ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಈಗ ಆ ಸಮಸ್ಯೆಗೆ ಮುಕ್ತಿ ನೀಡಲಾಗಿದೆ.
ಬಿಜೆಪಿ ಪೀರಾಪೂರ ಏತ ನೀರಾವರಿ (ರೂ.೭೯೬ಕೋಟಿ) ಯೋಜನೆ ಹಾಗೂ ಮುಳವಾಡ ಏತ ನೀರಾವರಿ ಯೋಜನೆ (೮೨೪ ಕೋಟಿ) ಯೋಜನೆಗಳಿಂದ ಈ ಭಾಗದ ಜಮೀನುಗಳು ನೀರಾವರಿಗೊಳಪಡುತ್ತಿವೆ. ಇದರಿಂದ ರೈತರ ಬದುಕು ಹಸನಾಗುತ್ತಿದೆ. ಕ್ಷೇತ್ರದಾದ್ಯಂತ ರೂ. ೫೦೦ ಕೋಟಿ ಮೊತ್ತದಲ್ಲಿ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಿರುವೆ. ರೈತರಿಗೆ ವಿದ್ಯುತ್ ಸಮಸ್ಯೆ ನಿವಾರಿಸಲು ೧೧೦ಕೆವಿ ಸಾಮರ್ಥ್ಯದ ೫ ವಿದ್ಯುತ್ ಸ್ಟೇಶನ್ ಮಂಜೂರು ಮಾಡಿಸಿದ್ದು ಅದರಲ್ಲಿ ೩ ಕೇಂದ್ರಕ್ಕೆ ಈಗಾಗಲೇ ಟೆಂಡರ್ ಆಗಿದೆ. ಈ ಬಾಗದಲ್ಲೇ ಕೇವಲ ನನ್ನ ಕ್ಷೇತ್ರಕ್ಕೆ ಮಂಜೂರಾದ ೪೦೦ ಕೆ.ವಿ ಸಾಮರ್ಥ್ಯದ ಸ್ಟೇಶನ್ (೮೦೦ ಕೋಟಿ ಮೊತ್ತದ)ನ್ನು ದೇವರ ಹಿಪ್ಪರಗಿಯಲ್ಲಿ ಸ್ಠಾಪನೆಗೆ ಕ್ರಮ ಕೈಗೊಂಡಿರುವೆ. ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದಕ್ಕಾಗಿ ಮತದಾರರು ನನ್ನನ್ನು ಗೆಲ್ಲಿಸಬೇಕಿದೆ.

ಉದಯರಶ್ಮಿ: ನೂತನ ತಾಲ್ಲೂಕು ಕೇಂದ್ರ ದೇವರಹಿಪ್ಪರಗಿಯಲ್ಲಿ ಸರಕಾರಿ ಕಚೇರಿಗಳೇ ಇಲ್ಲವಲ್ಲ?
ಸೋಮನಗೌಡ: ರಾಜ್ಯದಲ್ಲಿ ನೂತನವಾಗಿ ರಚಿಸಲಾದ ಎಲ್ಲ ತಾಲೂಕುಗಳಲ್ಲೂ ಈ ಸಮಸ್ಯೆ ಇದೆ. ಆದರೂ ಈಗಾಗಲೇ ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯ್ತಿ ಕಚೇರಿ ಹಾಗೂ ಟ್ರಜರಿ ಕಚೇರಿ ಆರಂಭವಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ರೂ. ೧೦ಕೋಟಿ ಮಂಜೂರಾಗಿದ್ದು ಸ್ಥಳದ ಕೊರತೆಯಿಂದ ಅದು ನೆನೆಗುದಿಗೆ ಬಿದ್ದಿದ್ದು ಈಗ ಬಗೆಹರಿದಿದೆ. ಬಿಇಓ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳ ನಿರ್ಮಾಣಕ್ಕೆ ಸರಕಾರಕ್ಕೆ ನಿರಂತರ ಬೇಡಿಕೆ ಸಲ್ಲಿಸಿರುವೆ. ಬರುವ ದಿನಗಳಲ್ಲಿ ಅವು ಪೂರ್ಣಗೊಳ್ಳಲಿವೆ.
ಉದಯರಶ್ಮಿ: ತಾವು ಮತ್ತೆ ಶಾಸಕರಾಗಿ ಆಯ್ಕೆಯಾದರೆ ತಮ್ಮ ಮುಂದಿರುವ ಯೋಜನೆಗಳೇನು?
ಸೋಮನಗೌಡ: ಕ್ಷೇತ್ರವನ್ನು ಸಮಗ್ರ ನೀರಾವರಿಗೊಳಪಡಿಸುವುದು, ಕ್ಷೇತ್ರದ ಎಲ್ಲ ಕೂಡು ರಸ್ತೆಗಳು, ಸಣ್ಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ರೈತರ ಉತ್ಪನ್ನ ಸಾಗಿಸಲು ಅನುಕೂಲ ಮಾಡಿಕೊಡುವುದು. ಈಗ ಅಪೂರ್ಣಗೊಂಡಿರುವ ಹಾಗೂ ಮಂಜೂರಾದ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿರುವೆ.
ಉದಯರಶ್ಮಿ: ಈ ಚುನಾವಣೆಯಲ್ಲಿ ತಮಗೆ ಪ್ರಬಲ ಎದುರಾಳಿ ಯಾರು?
ಸೋಮನಗೌಡ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಈರ್ವರೂ ಅಭ್ಯರ್ಥಿಗಳೂ ನನಗೆ ಪ್ರಬಲ ಎದುರಾಳಿಗಳೇ ಆಗಿದ್ದಾರೆ. ನಮ್ಮ ನಡುವೆ ಆರೋಗ್ಯಕರ ಸ್ಪರ್ಧೆ ಇದೆ. ಆದರೂ ನಾನು ಈ ಚುನಾವಣೆಯಲ್ಲಿ ೨೫ಸಾವಿರ ಮತಗಳ ಅಂತರದಿAದ ಗೆಲ್ಲುವ ವಿಶ್ವಾಸ ಹೊಂದಿರುವೆ.
ಉದಯರಶ್ಮಿ: ನಿಮ್ಮ ಅಧಿಕಾರಾವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂಬ ಆಪಾದನೆ ಇದೆಯಲ್ಲ?
ಸೋಮನಗೌಡ: ಆಪಾದನೆ ಮಾಡುವವರೊಂದಿಗೆ ನಾನು ಒಂದೇ ವೇದಿಕೆಯಲ್ಲಿ ಚರ್ಚಿಸಲು, ಉತ್ತರಿಸಲು ಸಿದ್ಧ. ಅಭಿವೃದ್ಧಿ ಕಾರ್ಯಗಳಾಗಿರದಿದ್ದರೆ ರಾಜಕೀಯ ನಿವೃತ್ತಿ ಪಡೆಯಲೂ ನಾನು ರೆಡಿ. ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ಈ ಚುನಾವಣೆಯಲ್ಲಿ ನನ್ನ ಕೈ ಹಿಡಿಯಲಿವೆ.
ಉದಯರಶ್ಮಿ: ಕೊನೆಯದಾಗಿ ಮತದಾರರಿಗೆ ನೀವು ನೀಡುವ ಸಂದೇಶವೇನು?
ಸೋಮನಗೌಡ: ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಾಡಿನ ಭವಿಷ್ಯವನ್ನು ನಿರ್ಧರಿಸಬೇಕು. ಜಾತಿ-ಮತ ನೋಡದೇ ಅಭಿವೃದ್ಧಿ ವಿಷಯಕ್ಕಾಗಿ ಯೋಗ್ಯ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡುವೆ.