ವಿಜಯಪುರ: ಔದ್ಯೋಗಿಕ ನಗರವನ್ನಾಗಿ ಮಾಡುವ ಯೋಜನೆಯನ್ನು ತಂದೆಯವರು ಹಾಕಿಕೊಂಡಿದ್ದು, ತಾವು ಆಶೀರ್ದಿಸುವ ಮೂಲಕ ಯೋಜನೆ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ತಂದೆ ಪರ ನಗರ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.23 ರ ಪುಲಕೇಶಿ ನಗರ, ಕೀರ್ತಿ ನಗರ, ಅಂಬೇಡ್ಕರ್ ಕಾಲೊನಿ, ನಿಸರ್ಗ ಕಾಲೊನಿ, ತೊರವಿ ಸೇರಿದಂತೆ ವಿವಿಧೆಡೆ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು.
ಹಿಂದಿನ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ರಸ್ತೆ, ಚರಂಡಿ ಸೇರಿದಂತೆ ಅವಶ್ಯಕ ಮೂಲಸೌಕರ್ಯ ಕಲ್ಪಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿಯಂತೆ ಔದ್ಯೋಗಿಕ ನಗರವನ್ನಾಗಿ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿ, ನಮ್ಮ ಭಾಗದ ಯುವಕರು ಪಾಲಕರನ್ನು ಬಿಟ್ಟು ದೂರದ ಊರುಗಳಿಗೆ ಹೋಗಿ ದುಡಿಯುವ ಬದಲಾಗಿ, ನಮ್ಮಲ್ಲೇ ಕೆಲಸ ಸಿಗುವಂತೆ ಮಾಡಲಾಗುವುದು. ಅದಕ್ಕೆ ತಮ್ಮ ಆಶೀರ್ವಾದ ಅವಶ್ಯ ಎಂದು ಹೇಳಿದರು.
ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇರುವ ನಾಯಕರನ್ನು ಬೆಂಬಲಿಸಿದರೆ ಮಾತ್ರ ನಾವು ಕಂಡ ಕನಸು ನನಸಾಗಲು ಸಾಧ್ಯ. ಅದು ಈ ಹಿಂದಿನ ಅವಧಿಯಲ್ಲಿ ಪ್ರತ್ಯಕ್ಷ ಕಂಡಿದ್ದಿರಿ. ಮುಂದೆ ಕೂಡ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲಿವೆ ಎಂದರು.
ಮಹಾನಗರ ಪಾಲಿಕೆ ಸದಸ್ಯರು, ಕಾಲೊನಿ, ಬಡಾವಣೆಗಳ ಹಿರಿಯ ನಾಗರಿಕರು, ಮಹಿಳೆಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.