ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಧುನಿಕ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರು ಸಮಾನರು, ಪ್ರಾಕೃತಿಕವಾಗಿ ಇಬ್ಬರು ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾ ಸುಸ್ಥಿರ ಸಮಾಜದ ಏಳಿಗೆಯಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಹೇಳಿದರು.
ಜಿಲ್ಲೆಯ ಬಸವನ ಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಕೋಶ (lQAC)ದಡಿಯಲ್ಲಿ ಪ್ರೇರಣ ಘಟಕ, ಮಹಿಳಾ ಘಟಕ ಮತ್ತು ಲೈಂಗಿಕ ಕಿರುಕುಳ ತಡೆ ಸಮಿತಿ ಗಳ ಸಹಯೋಗದೊಂದಿಗೆ ಡಿ.೭ರಂದು ನಡೆದ ಪ್ರೇರಣ ಘಟಕದ ಉದ್ಘಾಟನೆ ಮತ್ತು “ಲಿಂಗತ್ವದ ಅರಿವು ಮತ್ತು ಕಾನೂನು” ಎಂಬ ವಿಶೇಷ ಉಪನ್ಯಾಸವನ್ನು ಪ್ರೇರಣ ಘಟಕದ ಸಂಚಾಲಕಿ ಪ್ರೊ.ಮಮತ ಎನ್ ಹಾಗೂ ಮಹಿಳಾ ಘಟಕದ ಸಂಚಾಲಕಿ ಪ್ರೊ.ವಿಜಯಲಕ್ಷ್ಮಿ ರವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು”ಲಿಂಗತ್ವದ ಅರಿವು ಮತ್ತು ಕಾನೂನು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇಲ್ಲಿ ಹೆಣ್ಣು ಮತ್ತು ಗಂಡು ಇಬ್ಬರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅವುಗಳನ್ನು ಪಾಲಿಸುವುದರ ಮುಖಾಂತರ ಉತ್ತಮ ನಾಗರಿಕರಾಗಿ ಬದುಕಬೇಕೆಂದು ಡಾ.ಸುರೇಖಾ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವನಬಾಗೇವಾಡಿ ಪ್ರಾಂಶುಪಾಲ ಡಾ. ಎನ್.ಬಿ.ಹೊಸಮನಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಡಾ.ಹಿರಿಯ ಪ್ರಾಧ್ಯಾಪಕ ಡಾ. ಎಚ್.ಎಮ್.ನಾಟಿಕಾರ, ಪ್ರೇರಣ ಘಟಕದ ಸಂಚಾಲಕರಾದ ಮಮತಾ ಎನ್ ಮತ್ತು ಮಹಿಳಾ ಘಟಕದ ಸಂಚಾಲಕರಾದ ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

